ಮಂಗಳೂರು: ಗುಂಡು ಹಾರಿಸಿ ಪತ್ನಿಯನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಕೆಮ್ರಾಜೆ ಗ್ರಾಮದ ಕೋಡಿಮಜಲುವಿನಲ್ಲಿ ನಡೆದಿದೆ.
ವಿನೋದ ಕುಮಾರಿ ಕೊಲೆಯಾದ ಮಹಿಳೆ. ರಾಮಚಂದ್ರ ಗೌಡ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈ ಬಗ್ಗೆ ದಂಪತಿಯ ಪುತ್ರ ಪ್ರಶಾಂತ್ ಅವರು ಎಸ್.ಆರ್.ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಶಾಂತ್ ನೀಡಿದ ದೂರಿನ ವಿವರ: ತಂದೆ ರಾಮಚಂದ್ರ ಗೌಡರವರು ಯಾವಾಗಲು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, ಎಂದಿನಂತೆ ವಿಪರೀತ ಮದ್ಯಪಾನ ಮಾಡಿ ಜ. 17 ರಂದು ರಾತ್ರಿ ಮನೆಗೆ ಬಂದಿದ್ದರು. ರಾತ್ರಿ ಅಜ್ಜ, ಅಜ್ಜಿ ಮತ್ತು ತಾಯಿಗೆ ಬೈಯುತ್ತಿದ್ದವರು. 11-30ರ ವೇಳೆಗೆ ನಿರ್ಮಾಣ ಹಂತದಲ್ಲಿರುವ ಮನೆಯ ಅಡುಗೆ ಕೋಣೆಯೊಳಗೆ ಹೋಗಿದ್ದಾರೆ. ಅಲ್ಲಿ ತಾಯಿ ವಿನೋದ ಕುಮಾರಿ ಅವರೊಂದಿಗೆ ಜಗಳ ಮಾಡಿ, ಕೈಯಲ್ಲಿದ್ದ ಕೋವಿಯಿಂದ ತಾಯಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.