ಕರ್ನಾಟಕ

karnataka

ETV Bharat / state

ನಿರಾಶದಾಯಕವಾದ ಬಜೆಟ್ : ಕೇಂದ್ರ ಬಜೆಟ್ ಕುರಿತು ಮಲೆನಾಡಿಗರಿಂದ ಟೀಕೆ - UNION BUDGET 2025

ಕೇಂದ್ರದ ಬಜೆಟ್ ಕುರಿತು ಮಾತನಾಡಿರುವ ಮಲೆನಾಡಿನ ರೈತರು, ಇದೊಂದು ನಿರಾಶದಾಯಕವಾದ ಬಜೆಟ್ ಎಂದು ಜರಿದಿದ್ದಾರೆ.

malenadu-farmers-spoke-about-union-budget
ಕೇಂದ್ರ ಬಜೆಟ್​ ಕುರಿತು ಮಾತನಾಡಿದವರು (ETV Bharat)

By ETV Bharat Karnataka Team

Published : Feb 1, 2025, 8:00 PM IST

ಶಿವಮೊಗ್ಗ :ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ 8ನೇ ಬಜೆಟ್ ಕುರಿತು ಮಲೆನಾಡಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಬಜೆಟ್ ರೈತರಿಗೆ ನಿರಾಶದಾಯಕವಾಗಿದೆ : ಕೇಂದ್ರ ಸರ್ಕಾರ ಶನಿವಾರ (ಫೆ.1) ಮಂಡನೆ ಮಾಡಿರುವ ಬಜೆಟ್ ರೈತರಿಗೆ ನಿರಾಶದಾಯಕವಾದ ಬಜೆಟ್ ಆಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್‌. ಆರ್ ಬಸವರಾಜಪ್ಪ‌ ಟೀಕಿಸಿದ್ದಾರೆ.‌

ರೈತ ಸಂಘದ ಅಧ್ಯಕ್ಷ ಹೆಚ್​ ಆರ್ ಬಸವರಾಜಪ್ಪ , ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಗೋಪಿನಾಥ್​ ಹಾಗೂ ಇತರರು ಮಾತನಾಡಿದ್ದಾರೆ (ETV Bharat)

ಸ್ವಾಮಿನಾಥನ್ ಅವರ ಎಂಎಸ್​ಪಿ ಅನ್ನು ಕಾನೂನು ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಬಜೆಟ್​ನಲ್ಲಿ ಭದ್ರಾ‌‌ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಘೋಷಣೆ ಮಾಡಿದ್ರೂ ಸಹ ಈವರೆಗೆ ಅದಕ್ಕೆ ಹಣ ಬಿಡುಗಡೆ ಮಾಡಿಲ್ಲ. ಬಯಲು ಸೀಮೆ ರೈತರಿಗೆ ಬಜೆಟ್​ ನಿರಾಶದಾಯಕವಾಗಿದೆ ಎಂದರು.

ಸಹಕಾರಿ ಸಂಸ್ಥೆಗಳ ಸಾಲಕ್ಕೆ ಹೆಚ್ಚು ಒತ್ತು ಕೊಡಬೇಕಿತ್ತು. ಆದರೆ ಮೈಕ್ರೋ ಫೈನಾನ್ಸ್​ ಹಾಗೂ ಖಾಸಗಿ ಲೇವಾದೇವಿದಾರರ‌ನ್ನು ರೈತರು ಅವಲಂಬಿಸಿದ್ದಾರೆ. ಬ್ಯಾಂಕ್​ಗಳು ಸುಲಭವಾಗಿ ಸಾಲ ನೀಡುವಂತೆ ಮಾಡಬೇಕು. ನಬಾರ್ಡ್​ ಮೂಲಕ ಸಹಕಾರಿ ಸಂಸ್ಥೆಗಳಿಗೆ ಸಾಲ ನೀಡುವಂತೆ ಆಗಬೇಕಿತ್ತು. ಈ ಬಗ್ಗೆ ಮಾತನಾಡಿಲ್ಲ. ಆದಾಯ ಬರುವವರಿಗೆ ಭಾರಿ ರಿಯಾಯಿತಿ ನೀಡಿದ್ದಾರೆ. ಇದರಿಂದ ಮಧ್ಯಮವರ್ಗದವರಿಗೆ ಅನುಕೂಲವಾಗಿದೆ, ಇದು ಸ್ವಾಗತರ್ಹವಾಗಿದೆ. ಆದರೆ ಆದಾಯವೇ ಇಲ್ಲದ ವರ್ಗದ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.

ಸಾಲ ನೀಡುವ, ಸಾಲ ಉತ್ತೇಜನಕ್ಕೆ ನಿರ್ಮಲಾ ಸೀತಾರಾಮನ್ ಒತ್ತು ಕೊಟ್ಟಿಲ್ಲ. 3-5 ಲಕ್ಷ ಕಿಸಾನ್ ಕಾರ್ಡ್​ನಲ್ಲಿ ಸಾಲ ಘೋಷಣೆ ಮಾಡಿದ್ದಾರೆ. ಆದರೆ, ರೈತರ ಸಿಬಿಲ್ ಸ್ಕೋರ್ ನೋಡಿದ್ರೆ ರೈತರಿಗೆ ಸಾಲ ಸಿಗುವುದೇ ಇಲ್ಲ. ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ಸಾಲ ನೀಡದ ಕಾರಣಕ್ಕೆ ರೈತರು ಖಾಸಗಿ ಹಣಕಾಸು ಸಂಸ್ಥೆಗೂ ಹಾಗೂ ಮೈಕ್ರೋ ಫೈನಾನ್ಸ್​ಗಳ ಮೇಲೆ ಮುಗಿ ಬಿದ್ದು ಸಾಲ ತೆಗೆದುಕೊಳ್ಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಕುಳಿತು ರೈತರ ಪರ ಚಿಂತನೆ ನಡೆಸಿದರೆ, ಮಾತ್ರ ರೈತ ಉಳಿಯುತ್ತಾನೆ. ಇಲ್ಲವಾದಲ್ಲಿ ರೈತರು ಒಕ್ಕಲುತನವನ್ನೇ ಬಿಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಂಎಸ್ಎಂಇ ಕ್ಷೇತ್ರದಲ್ಲಿದ್ದವರಿಗೆ ತುಂಬ ಅನುಕೂಲಕರ : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಗೋಪಿನಾಥ್ ಅವರು ಮಾತನಾಡಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್​ ಅವರು ಮಂಡಿಸಿರುವ 8ನೇ ಕೇಂದ್ರ ಬಜೆಟ್ ಎಂಎಸ್ಎಂಇ ಕ್ಷೇತ್ರದಲ್ಲಿದ್ದವರಿಗೆ ತುಂಬ ಅನುಕೂಲಕರವಾಗಿದೆ. ನಮ್ಮ ಒಂದು ಕೋಟಿ ಎಂಎಸ್ಎಂಇ ಕ್ಷೇತ್ರದಿಂದ ಇಂಟರ್ ನ್ಯಾಶನಲ್ ಗ್ಲೋಬಲ್ ಹಬ್ ಮಾಡಲು ತುಂಬ ಅನುಕೂಲಕರವಾಗಿದೆ. ಎಂಎಸ್ಎಂಇ ನವರಿಗೆ 5 ಕೋಟಿಯಿಂದ 10 ಕೋಟಿಗೆ ಸಹಾಯಧನ ಏರಿಕೆ ಮಾಡಲಾಗಿದೆ. ಅಲ್ಲದೆ, ಸ್ಟಾರ್ಟ್​ಅಪ್​ ಮಾಡುವವರಿಗೆ 10 ಕೋಟಿಯಿಂದ 20 ಕೋಟಿ ಸಾಲವನ್ನ ಏರಿಸಲಾಗಿದೆ. ಇದರಿಂದ ಎಂಎಸ್ಎಂಇ ಕ್ಷೇತ್ರಕ್ಕೆ ತುಂಬ ಅನುಕೂಲಕರವಾಗಿದೆ ಎಂದರು. ಎಲ್ಲಾ ಕೇಂದ್ರ ಸರ್ಕಾರದ ಆಸ್ಪತ್ರೆಯಲ್ಲೂ ಸಹ ಕ್ಯಾನ್ಸರ್ ರೋಗಿ ತಪಾಸಣೆ ಮಾಡಲು ಹೊರಟಿರುವುದು ಒಳ್ಳೆಯ ಕೆಲಸವಾಗಿದೆ. ಐಐಟಿಗೆ 65 ಸಾವಿರದಿಂದ 1.50 ಲಕ್ಷದವರೆಗೆ ಏರಿಕೆ ಮಾಡಲಾಗಿದೆ ಎಂದರು.

ನಿರಾಶದಾಯಕ ಬಜೆಟ್ : ''ಇಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಇದು ಕರ್ನಾಟಕದ ಜನತೆಗೆ ನಿರಾಶದಾಯಕ ಬಜೆಟ್ ಆಗಿದೆ.‌ ಇಂದು‌ ತೆರಿಗೆ ಏರಿಕೆ ಮಿತಿಯನ್ನು 12 ಲಕ್ಷಕ್ಕೆ ಏರಿಕೆ ಮಾಡಿರಬಹುದು. ಆದರೆ ದಿನ ಬಳಕೆಯ ವಸ್ತುಗಳ ಮೇಲಿನ ದರ ಏರಿಕೆ ಮಾಡಲಾಗಿದೆ. ಜಿಎಸ್​ಟಿ ಈಗ ದುಬಾರಿ ಆಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ನಿರಾಶದಾಯಕವಾಗಿದೆ. ಬಜೆಟ್ ಕೇವಲ ದಾಖಲಾತಿಯಲ್ಲಿ ಇರುತ್ತದೆ. ಇದು ಜನ ಸಾಮಾನ್ಯರಿಗೆ ತಲುಪುವುದೇ ಇಲ್ಲ. ಮುದ್ರಾ ಯೋಜನೆಯಲ್ಲಿ ಸಾಮಾನ್ಯ ವರ್ಗದವರು ಮುದ್ರಾ‌ಲೋನ್ ತೆಗೆದುಕೊಳ್ಳಲು ಆಗುತ್ತಿಲ್ಲ. ಯಾರು ಬ್ಯಾಂಕ್ ಮ್ಯಾನೇಜರ್ ಜೊತೆ ಚೆನ್ನಾಗಿದ್ದರೆಯೋ ಅವರಿಗೆ ಮಾತ್ರ ಮುದ್ರಾ ಲೋನ್ ಪ್ರಯೋಜನ ಲಭ್ಯವಾಗುತ್ತಿದೆ. ವ್ಯಾಪಾರ ಮಾಡಿ ಸ್ವಾವಲಂಬಿ ಜೀವನ ನಡೆಸುವವರಿಗೆ ಈ ಲೋನ್ ಪ್ರಯೋಜನ ಸಿಕ್ತಾ ಇಲ್ಲ. ಕೇಂದ್ರದ ಬಜೆಟ್ ಪುಸ್ತಕದ ಬದನೆಕಾಯಿ ಆಗಿದೆ. ಇವರು ಕೇವಲ ಘೋಷಣೆಯಲ್ಲೇ ಇದೆ.‌ ಇದು ಮಧ್ಯಮ ವರ್ಗದವರಿಗೆ ನಿರಾಸೆಯನ್ನುಂಟು ಮಾಡಿದೆ'' ಎಂದು ಸ್ಥಳೀಯರಾದ ಧನರಾಜ್ ತಿಳಿಸಿದ್ದಾರೆ.

ಜಿಎಸ್​ಟಿ ಕಡಿಮೆ ಮಾಡುವ ಭರವಸೆ ಇತ್ತು : ವ್ಯಾಪಾರಿ ಗೌತಮ್ ಅವರು ಮಾತನಾಡಿ, ಜಿಎಸ್​ಟಿಯನ್ನು ಕಡಿಮೆ ಮಾಡದೆ ಇರುವುದು ನಮಗೆಲ್ಲಾ ನಿರಾಸೆ ತಂದಿದೆ. ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಹಾಗೂ ಅಬಕಾರಿಯನ್ನು ತರಲಿಲ್ಲ. ಇವರೆಡರಲ್ಲಿ ಜಿಎಸ್​ಟಿ ತಂದರೆ ದರ ಕಡಿಮೆ ಆಗುತ್ತದೆ. ಇದರಿಂದ ಎಲ್ಲಾ ವಸ್ತುಗಳ ಉತ್ಪಾದನೆ ಮೇಲೆ ದರ ಕಡಿಮೆ ಆಗುತ್ತದೆ. ಇಂದು ಜಿಎಸ್​ಟಿ ಶೇ.18 ರಷ್ಟು ಇದೆ. ಎಲ್ಲಾ ವ್ಯವಹಾರದಲ್ಲೂ ಜಿಎಸ್​ಟಿ ಇದೆ. ಇದರಿಂದ ವ್ಯಾಪಾರ ಕಡಿಮೆ ಆಗುತ್ತಿದೆ. ಇದು ನಿರಾಸೆ ತಂದಿದೆ ಎಂದಿದ್ದಾರೆ.

ಇದನ್ನೂ ಓದಿ :ನನಗಂತೂ ಬಜೆಟ್​ ಮೇಲೆ ಏನೂ ನಿರೀಕ್ಷೆ ಇಲ್ಲ : ಸಚಿವ ಪ್ರಿಯಾಂಕ್​ ಖರ್ಗೆ - UNION BUDGET 2025

ABOUT THE AUTHOR

...view details