ಕರ್ನಾಟಕ

karnataka

ETV Bharat / state

ಕೋವಿಡ್‌ ಲಾಕ್‌ಡೌನ್‌ ನಂತರ ರಾಜ್ಯದಲ್ಲಿ ಮತ್ತೆ ಹೆಚ್ಚಿದ ರಸ್ತೆ ಅಪಘಾತಗಳು; ಇಲ್ಲಿದೆ ಅಂಕಿಅಂಶ - Major Road Accident In Karnataka

ರಾಜ್ಯಾದ್ಯಂತ ಕೋವಿಡ್ ಲಾಕ್‌ಡೌನ್‌ ನಂತರ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹಾವೇರಿಯಲ್ಲಿ ಗುರುವಾರ ನಡೆದ ಭೀಕರ ಅಪಘಾತದಲ್ಲಿ ರಾಷ್ಟ್ರೀಯ ಫುಟ್‌ಬಾಲ್ ತಂಡದ ಅಂಧ ಆಟಗಾರ್ತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ ವರದಿಯಾದ ರಸ್ತೆ ಅವಘಡಗಳ ಮಾಹಿತಿ ಇಲ್ಲಿದೆ.

By ETV Bharat Karnataka Team

Published : Jun 28, 2024, 9:37 PM IST

Updated : Jun 28, 2024, 10:51 PM IST

Road accident in Karnataka
ಸಾಂದರ್ಭಿಕ ಚಿತ್ರ (ETV Bharat)

ಹಾವೇರಿ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹದಿಮೂರು ಜನರು ದುರ್ಮರಣಕ್ಕೀಡಾಗಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅತಿವೇಗದಿಂದ ಬಂದ ಮಿನಿ ಬಸ್ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಇದು ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ದೊಡ್ಡ ಹಾಗೂ ಭೀಕರ ರಸ್ತೆ ಅಪಘಾತದಲ್ಲಿ ಒಂದು.

2015ರಿಂದ 2024ರವರೆಗೆ ಪ್ರಕರಣಗಳ ಸಂಖ್ಯೆ (ETV Bharat)

ಬೆಂಗಳೂರಿನಲ್ಲಿ ನಡೆದ ಅಪಘಾತಗಳ ವಿವರ: ಬೆಂಗಳೂರು ಟ್ರಾಫಿಕ್ ಪೊಲೀಸ್ (ಬಿಟಿಪಿ) ಅಂಕಿ-ಅಂಶಗಳ ಪ್ರಕಾರ, 2023ರಲ್ಲಿ ರಾಜ್ಯ ರಾಜಧಾನಿಯಲ್ಲಿ 4,974 ರಸ್ತೆ ಅಪಘಾತಗಳು ಸಂಭವಿಸಿವೆ. 2022ರಲ್ಲಿ 3,823 ಘಟನೆಗಳು ವರದಿಯಾಗಿದ್ದವು. ಆದರೆ, ಒಂದೇ ವರ್ಷದಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ. ಇದಕ್ಕೂ ಮುನ್ನ 2017ರಲ್ಲಿ 5,064 ಅಪಘಾತಗಳು ದಾಖಲಾಗಿದ್ದವು. ಲಾಕ್‌ಡೌನ್‌ಗಳಿಂದಾಗಿ 2020 ಮತ್ತು 2021ರಲ್ಲಿ ಅಪಘಾತಗಳ ಸಂಖ್ಯೆ ಕುಸಿದಿತ್ತು. ಇದೀಗ ಮತ್ತೆ ಕೋವಿಡ್​ಕ್ಕಿಂತ ಮುಂಚಿನ ಘಟನೆಗಳನ್ನೂ ಮೀರುತ್ತಿದೆ.

2021, 2022ನೇ ಸಾಲಿನ ಅಪಘಾತ ಪ್ರಕರಣಗಳು (ETV Bharat)

ರಾಜ್ಯದ ರಸ್ತೆ ಅಪಘಾತಗಳ ಮಾಹಿತಿ: ಇಡೀ ಕರ್ನಾಟಕದಲ್ಲಿ ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ, 2022ರಲ್ಲಿ ಒಟ್ಟಾರೆ ನಡೆದ ರಸ್ತೆ ಅಪಘಾತಗಳಲ್ಲಿ 29,090 ಸಾವುಗಳು ಸಂಭವಿಸಿವೆ. ಪ್ರಕೃತಿ ವಿಕೋಪದಿಂದ 140, ಇತರ ಕಾರಣಗಳಿಂದ 25,124 ಜನರು ಮೃತಪಟ್ಟಿದ್ದರು. 2021ರಲ್ಲಿ ರಸ್ತೆ ಅಪಘಾತಗಳಲ್ಲಿ 25,278 ಜನ ಬಲಿಯಾಗಿದ್ದರೆ, ಪ್ರಕೃತಿ ವಿಕೋಪದಿಂದ 154 ಹಾಗೂ ಇತರ ಕಾರಣಗಳಿಂದ 25,124 ಪ್ರಾಣ ಕಳೆದುಕೊಂಡಿದ್ದರು.

2024ರಲ್ಲಿ ನಡೆದ ಭೀಕರ ರಸ್ತೆ ಅವಘಡಗಳು:

  • 01.01.2024: ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ನಡೆದ ರಸ್ತೆ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದರು. ವಿವಿಧೆಡೆ ಅಪಘಾತಗಳಲ್ಲಿ 15 ಮಂದಿ ಗಾಯಗೊಂಡಿದ್ದರು.
  • 15.01.2024: ಬೆಂಗಳೂರು ಮತ್ತು ತುಮಕೂರಿನಲ್ಲಿ ವರದಿಯಾದ ಐದು ಅಪಘಾತಗಳಲ್ಲಿ ದಿನಗೂಲಿ ಕಾರ್ಮಿಕ ಸೇರಿ ಆರು ಜನರು ಮೃತಪಟ್ಟಿದ್ದರು.
  • 16.01.2024: ಬೆಂಗಳೂರು ನಗರ ಮತ್ತು ನೆಲಮಂಗಲದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ತಂದೆ-ಮಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
  • 19.01.2024: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳಿ ಕಾರಿನ ಮುಂಭಾಗದ ಟಯರ್‌ ಸ್ಫೋಟದಿಂದ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ಹೋಗುವಾಗ ಮಾರ್ಗದಲ್ಲಿ ಘಟನೆ ನಡೆದಿತ್ತು.
  • 18.04.2024: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾತ್ ತಾಲೂಕಿನಲ್ಲಿ ವಾಹನ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಬಾಗಲಕೋಟ ಜಿಲ್ಲೆ ಜಮಖಂಡಿಯ ಐವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ, 9 ಮಂದಿ ಗಾಯಗೊಂಡಿದ್ದರು.
  • 07.04.2024: ಬೆಂಗಳೂರಿನಿಂದ ಗೋಕಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಪಲ್ಟಿಯಾಗಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದರು. 35 ಮಂದಿ ಗಾಯಗೊಂಡಿದ್ದರು.
  • 24.05.2024: ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಎಂಟು ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದರು.
  • 26.05.2024: ಹಾಸನ ನಗರದ ಹೊರಭಾಗದಲ್ಲಿ ಕಾರ್-ಟ್ರಕ್ ಡಿಕ್ಕಿ ಸಂಭವಿಸಿ ಮಗು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು.
  • 27.05.2024: ರಾಜ್ಯಾದ್ಯಂತ ಈ ದಿನ 24 ಗಂಟೆಗಳಲ್ಲಿ ನಡೆದ ಅಪಘಾತಗಳಲ್ಲಿ ಎಂಟು ಪಾದಚಾರಿಗಳು, 30 ಬೈಕ್​ ಸವಾರರು ಸೇರಿದಂತೆ 51 ಮಂದಿ ಸಾವನ್ನಪ್ಪಿದ್ದರು.
  • 07.06.2024: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಗರಗೆರೆ ವಟದಹೊಸಹಳ್ಳಿ ಬಳಿ ಕಾರು ಕಮರಿಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯಗೊಂಡಿರುವ ವರದಿಯಾಗಿತ್ತು.

ಇದನ್ನೂ ಓದಿ:ಹಾವೇರಿ ಅಪಘಾತ: ರಾಷ್ಟ್ರೀಯ ಫುಟ್‌ಬಾಲ್ ತಂಡದ ಅಂಧ ಆಟಗಾರ್ತಿಯ IAS ಕನಸು ಸಾವಿನಲ್ಲಿ ಅಂತ್ಯ!

Last Updated : Jun 28, 2024, 10:51 PM IST

ABOUT THE AUTHOR

...view details