ಬೆಂಗಳೂರು:76ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಪುಷ್ಪ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ರಾಮಾಯಣದ ಕತೃ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪ್ರದರ್ಶನಕ್ಕೆ ಬರುವವರಿಗೆ ಇದೇ ಮೊದಲ ಬಾರಿಗೆ ಕ್ಯೂಆರ್ ಕೋಡ್ನ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.
ಲಾಲ್ಬಾಗ್ ಗಾಜಿನ ಮನೆಯಲ್ಲಿ ಇಂದಿನಿಂದ (ಜ.16) ನಡೆಯುವ 217ನೇ ಫಲಪುಷ್ಪ ಪ್ರದರ್ಶನ ಕುರಿತಂತೆ ತೋಟಗಾರಿಕಾ ಇಲಾಖೆಯ ಮಾಹಿತಿ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಲಾಖೆಯ ನಿರ್ದೇಶಕ ಡಿ.ಎಸ್.ರಮೇಶ್, ಫಲ ಪುಷ್ಪ ಪ್ರದರ್ಶನಕ್ಕೆ ಪ್ರತಿಯೊಂದು ಬಾರಿಯೂ ಒಂದೊಂದು ರೀತಿಯ ವಿಷಯಾಧಾರಿತ ವಸ್ತುನ್ನು ಆಯ್ಕೆ ಮಾಡಲಾಗುತ್ತಿದೆ. ಆದ್ರೂ ಸಹ ಪ್ರಸಕ್ತ ವರ್ಷ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಪರಿಸರವಾದಿ ಯಲ್ಲಪ್ಪರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ವಾಲ್ಮೀಕಿ ಕುರಿತ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಸೂಚಿಸಿದ್ದರು ಎಂದು ಹೇಳಿದರು.
ಅಲ್ಲದೆ, ಲಾಲ್ ಬಾಗ್ ಈವರೆಗೂ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಆಫ್ ಲೈನ್ ಮತ್ತು ಆನ್ ಲೈನ್ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ನಾಲ್ಕು ದ್ವಾರಗಳಲ್ಲಿ ಟಿಕೆಟ್ ಕೌಂಟರ್ಗಳನ್ನು ಅಳವಡಿಸಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ ಇದೇ ಮೊದಲ ಬಾರಿಗೆ ಕ್ಯೂ.ಆರ್. ಕೋಡ್ ಮೂಲಕ ಪ್ರದರ್ಶನನಕ್ಕೆ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಅದರಂತೆ ನಗರದ ಬಸ್ ನಿಲ್ದಾಣಗಳು, ಮೆಟ್ರೋ ರೈಲು ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕ್ಯೂ.ಆರ್.ಕೋಡ್ ಸ್ಟಿಕ್ಕರ್ ಅಂಟಿಸುವ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.
ಮುಂಗಡ ಟಿಕೆಟ್ ಬುಕ್ ಮಾಡಲು https://hasiru.karnataka.gov.in/floweshow/login.aspx ವೆಬ್ಸೈಟ್ಗೆ ಭೇಟಿ ಕೊಡಬೇಕು. ಈ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವುದಕ್ಕಾಗಿ ಈ ಲಿಂಕ್ನಲ್ಲಿ ಬರುವ ಕ್ಯೂಆರ್ ಕೋಡ್ನ್ನು ಪರಿಚಯಿಸಲಾಗಿದೆ. ಈ ಕ್ಯೂರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಪಡೆಯಬಹುದಾಗಿದೆ. ಅದನ್ನು ದ್ವಾರದಲ್ಲಿ ತೋರಿಸಿ ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ ಎಂದು ಅವರು ವಿವರಿಸಿದರು.
ಪ್ರದರ್ಶನದ ಪ್ರಮುಖ ಆಕರ್ಷಣೆಗಳು :ಇಂಡೋ ಅಮೇರಿಕನ್ ಹೈ-ಬ್ರೀಡ್ ಸೀಡ್ಸ್ ಕಂಪೆನಿಯ ಆಕರ್ಷಕ ಹೂವುಗಳ ಜೋಡಣೆ ಮತ್ತು ವಾಲ್ಮೀಕಿ ಪುತ್ಥಳಿಯನ್ನು ಅನಾವರಣ ಮಾಡಲಾಗುತ್ತಿದೆ. ಅಲ್ಲದೇ ವೈವಿಧ್ಯಮಯ 1.75 ಲಕ್ಷ ಹೂವುಗಳು ಮತ್ತು ಎಲೆ ಜಾತಿಯ ಗಿಡಗಳ ಪ್ರದರ್ಶನವೂ ಇರಲಿದೆ.
ಬೃಹತ್ ಹುತ್ತ : ವಾಲ್ಮೀಕಿ ಎಂದರೆ ಬೃಹತ್ ಹುತ್ತವಾಗಿದೆ. ಸಂಸ್ಕೃತದಲ್ಲಿ ಹುತ್ತ ಎಂದರೆ ವಾಲ್ಮೀಕ ಎಂಬುದಾಗಿದೆ. ಇದನ್ನು ಆಕರ್ಷಣೆ ಮಾಡುವುದರ ಸಲುವಾಗಿ ಗಾಜಿನ ಮನೆಯ ಮಧ್ಯಭಾಗದಲ್ಲಿ ವಿವಿಧ ಜಾತಿಯ ಸುಮಾರು 1.5 ಲಕ್ಷ ಹೂವುಗಳಿಂದ ಬೃಹತ್ ಹುತ್ತವನ್ನು ಅನಾವರಣ ಮಾಡಲಾಗಿದ್ದು, ಇದು ಗಾಜಿನ ಮನೆಯ ಪ್ರಮುಖ ಆಕರ್ಷಣೆಯಾಗಿರಲಿದೆ.