ಬೆಳಗಾವಿ:ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಕ್ಕು ಸಾವನ್ನಪ್ಪಿದ ನಾಲ್ವರ ಮೃತದೇಹ ಹಾಗೂ ಗಾಯಗೊಂಡ ನಾಲ್ವರನ್ನು ವಿಮಾನ (ಏರ್ ಲಿಫ್ಟ್) ಮೂಲಕ ಬೆಳಗಾವಿಗೆ ಕರೆತರಲು ಸಿದ್ಧತೆ ನಡೆದಿದೆ.
ಮೃತರಾದ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಮಹಾದೇವಿ ಬಾವನೂರ, ಅರುಣ ಕೋಪರ್ಡೆ ಅವರ ಮೃತದೇಹಗಳನ್ನು ಹಾಗೂ ಗಾಯಗೊಂಡ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋರ್ಪಡೆ ಸೇರಿ ನಾಲ್ವರನ್ನೂ ಬೆಳಗಾವಿಗೆ ಕರೆ ತರಲಾಗುತ್ತಿದೆ.
ಆಂಬ್ಯುಲೆನ್ಸ್ ಮೂಲಕ ಮೃತದೇಹಗಳನ್ನು ಗುರುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಇನ್ನೊಂದು ಆಂಬ್ಯುಲೆನ್ಸನಲ್ಲಿ ಗಾಯಾಳುಗಳು ದೆಹಲಿ ತಲುಪಿದ್ದಾರೆ. ಮಧ್ಯಾಹ್ನ 3ಕ್ಕೆ ವಿಮಾನ ದೆಹಲಿಯಿಂದ ಹೊರಡಲಿದ್ದು, ಸಂಜೆ 5.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
ಈ ಕೆಲಸಕ್ಕೆ ನೇಮಿಸಿರುವ ಮೂವರು ನೋಡಲ್ ಅಧಿಕಾರಿಗಳು ಬುಧವಾರ ಸಂಜೆಯೇ ದೆಹಲಿಗೆ ಪ್ರಯಾಣ ಬೆಳೆಸಿದ್ದು, 'ಏರ್ ಲಿಫ್ಟ್' ಮಾಡಲು ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
30 ಜನ ಸಾವು :ಮಹಾಕುಂಭ ಮೇಳ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮ ಬಳಿ ಕಾಲ್ತುಳಿತ ಉಂಟಾಗಿ 30 ಭಕ್ತರು ಮೃತಪಟ್ಟು, 90ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿತ್ತು. ಇದರಲ್ಲಿ ಬೆಳಗಾವಿ ನಾಲ್ವರು ಸಹ ಮೃತಪಟ್ಟಿದ್ದರು.
ಎರಡು ಬಸ್ಗಳಲ್ಲಿ ತೆರಳಿದ್ದ ಬೆಳಗಾವಿಗರು :ಪ್ರಯಾಗ್ ರಾಜ್ಗೆ ಬೆಳಗಾವಿಯಿಂದ ಎರಡು ಬಸ್ಗಳಲ್ಲಿ ತೆರಳಿದ್ದ 60 ಜನರ ಪೈಕಿ ನಾಲ್ವರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಉಳಿದವರು ಸುರಕ್ಷಿತವಾಗಿದ್ದಾರೆ.
ಬೆಳಗಾವಿ ನಗರದ ನಾಲ್ವರು ಮೃತರಾಗಿದ್ದರಿಂದ ಅವರ ಜೊತೆಗೆ ತೆರಳಿದ್ದ ಇನ್ನುಳಿದ 56 ಜನರ ಕುಟುಂಬಸ್ಥರು ತೀವ್ರ ಆತಂಕಕ್ಕೀಡಾಗಿದ್ದರು. ಹಾಗಾಗಿ, ವಿಡಿಯೋ ಹೇಳಿಕೆ ಮೂಲಕ ನಾವು ಸುರಕ್ಷಿತರಾಗಿದ್ದು, ಯಾರೂ ಆತಂಕ ಪಡಬೇಕಿಲ್ಲ. ನಾವು ಇಲ್ಲಿಂದ ಬೆಳಗಾವಿಗೆ ಟ್ರಾವೆಲ್ ಏಜೆನ್ಸಿ ಬಸ್ನಲ್ಲಿ ಬರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇಬ್ಬರು ಅಧಿಕಾರಿಗಳ ನೇಮಕ :ಪ್ರಯಾಗ್ ರಾಜ್ನಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅವರ ಮೃತದೇಹಗಳನ್ನು ತರಲು ವಿಶೇಷ ಜಿಲ್ಲಾಧಿಕಾರಿ ಹರ್ಷಾ ಶೆಟ್ಟಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಎನ್. ಎಸ್ ಅವರನ್ನು ನೋಡಲ್ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇಮಿಸಿ ಆದೇಶ ಹೊರಡಿಸಿದ್ದರು. ಈಗಾಗಲೇ ಈ ಅಧಿಕಾರಿಗಳು ಪ್ರಯಾಗ್ ರಾಜ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಅದೇ ರೀತಿ ಕರ್ನಾಟಕ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದ್ದು, ಸಂಕಷ್ಟದಲ್ಲಿ ಸಿಲುಕಿದವರು ಸಹಾಯಕ್ಕಾಗಿ 080-22340676 ನಂಬರ್ ಸಂಪರ್ಕಿಸುವಂತೆ ಕೋರಲಾಗಿದೆ.
ಇದನ್ನೂ ಓದಿ:ಹಠ ಮಾಡಿ ಪ್ರಯಾಗ್ರಾಜ್ಗೆ ಹೋದ ಮಗಳು, ಸಾವಿಗೂ ಮುನ್ನ ಫೇಸ್‌ಬುಕ್ ಲೈವ್; ಪತ್ನಿ, ಮಗಳ ಕಳ್ಕೊಂಡು ಒಂಟಿಯಾದ ವ್ಯಕ್ತಿ
ಇದನ್ನೂ ಓದಿ: ಮಹಾಕುಂಭ ಮೇಳ - ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ 30 ಜನರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಿದ ಸಿಎಂ ಯೋಗಿ