ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಂತ ಮಾಜಿ ಶಾಸಕರ ಪಡೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಬಿಜೆಪಿ ರೆಬೆಲ್ ತಂಡಕ್ಕೆ ಕೌಂಟರ್ ಕೊಡಲು ಆಪ್ತರು ಬೆಂಗಳೂರಿನ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಉಪಹಾರದ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ''ಸ್ವಯಂಘೋಷಿತ ಹಿಂದೂ ನಾಯಕ ಎನಿಸಿಕೊಂಡವರು ಗೋಮುಖ ವ್ಯಾಘ್ರ. ಸದಾನಂದಗೌಡ ವಿರುದ್ಧವೂ ಮಾತಾಡಿದ್ದಾರೆ. ನಾವು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ'' ಎಂದರು.
ಯತ್ನಾಳ್ಗೆ ಸೋನಿಯಾ, ರಾಹುಲ್ ಸುಪಾರಿ: ''ಸದಾನಂದಗೌಡರು ಮಾತನಾಡಿದ್ದಕ್ಕೆ ಬಿಚ್ಚಿಡ್ತೀನಿ ಅಂತೀಯಲ್ಲ. ನೀನು ಏನು ಬ್ಲ್ಯಾಕ್ ಮೇಲ್ ಮಾಸ್ಟರಾ? ಅದೇನು ಬಿಚ್ಚಿಡು ನೋಡೋಣ, ನಾವು ನಿಂದು ಬಿಚ್ಚಿಡ್ತೀವಿ. ಬೀದಿಯಲ್ಲಿ ತಮಟೆ ಹೊಡೆಯುತ್ತಾ ಹೋಗ್ತಿರೋರು ನೀವು. ನಾಗರಹಾವುಗಳು ನೀವು. ಯತ್ನಾಳ್ ನಿನ್ನ ಕೊಡುಗೆ ಏನು? ಇವರು ಮನೆಗೆ ಕನ್ನ ಹಾಕುವವರು, ಕಾಂಗ್ರೆಸ್ನ ಏಜೆಂಟರು. ನೀನು ಏನು ಹಿಟ್ಲರಾ? ಬಿಜೆಪಿ ಮುಗಿಸು ಅಂತಾ ಕಾಂಗ್ರೆಸ್‌ನವರು ಯತ್ನಾಳ್ಗೆ ಸುಪಾರಿ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಯತ್ನಾಳ್ಗೆ ಸುಪಾರಿ ನೀಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.
''ನಾವು ಯಾರೂ ಪರ್ಯಾಯ ಸಭೆಗಳನ್ನು ಮಾಡುತ್ತಿಲ್ಲ. ಪಕ್ಷದ ವೇದಿಕೆಯಲ್ಲಿ ನಾವು ಪ್ರವಾಸ ಮಾಡ್ತಿದ್ದೇವೆ. ದಾವಣಗೆರೆ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸುತ್ತೇವೆ. ವಿಜಯಪುರದ ಹಾಲಿ ಸಚಿವ ಹಾಗೂ ಪ್ರಭಾವಿ ಸಚಿವನ ಜೊತೆ ಹೊಂದಾಣಿಕೆ ಮಾಡಿಕೊಂಡು ನೀನು ಗೆದ್ದು ಇಡೀ ಜಿಲ್ಲೆಯ ಬಿಜೆಪಿ ಶಾಸಕರನ್ನು ಸೋಲಿಸಿದ್ದೀಯಾ. ಮೊನ್ನೆ ಶಿಗ್ಗಾಂವಿನಲ್ಲಿ ಭರತ್ ಬೊಮ್ಮಾಯಿ ಸೋಲಿಗೂ ನೀನೇ ಕಾರಣ'' ಎಂದು ಏಕವಚನದಲ್ಲೇ ಬಸನಗೌಡ ಯತ್ನಾಳ್ ವಿರುದ್ಧ ಕಿಡಿಕಾರಿದರು.
''ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ್ದು ಹೈಕಮಾಂಡ್ ನಾಯಕರು. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಇದ್ದರೂ ನಾವು ಒಟ್ಟಾಗಿಯೇ ಇದ್ದೇವೆ ಅಂತ ಹೇಳ್ತಾರೆ. ಕಾಂಗ್ರೆಸ್‌ನಲ್ಲಿ ದೊಡ್ಡ ಒಡಕು ಇದ್ದರೂ ಸಿದ್ದರಾಮಯ್ಯ, ಡಿಕೆಶಿ ಜೊತೆ ಇದ್ದೇವೆ ಅಂತ ಹೇಳುತ್ತಿದ್ದಾರೆ. ನಿಮ್ಮ ಹರಕು ಬಾಯಿ ಮುಚ್ಚಬೇಕು. ನಾವು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇವೆ. ಯತ್ನಾಳ್ ಟೀಮ್ ವಿರುದ್ಧ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತೇವೆ'' ಎಂದರು.
ಯಡಿಯೂರಪ್ಪ ನಮ್ಮ ಪರಮೋಚ್ಛ ನಾಯಕ:ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ''ನಮ್ಮದು ಸಂಘಟನೆ ಪರವಾದ ಧ್ವನಿ. ನಮ್ಮದು ಸಮಾನ ವಯಸ್ಕರ ಟೀಂ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾರ್ಯಕರ್ತರು ಇದ್ದರೆ ಮಾತ್ರ ಪಕ್ಷ ಮತ್ತು ನಾಯಕ. ಮತ್ತೆ ಸರ್ಕಾರ ಬರಬೇಕು ಅಂತ ಹೋರಾಟ ಮಾಡುತ್ತಿದ್ದೇವೆ. ರಾಜ್ಯಾಧ್ಯಕ್ಷರ ಕೈ ಬಲಪಡಿಸಲು ನಾವು ಇಂದು ಇಲ್ಲಿ ಸೇರಿದ್ದೇವೆ. ಯಾವುದೋ ಚಟಕ್ಕಾಗಿ ನಾವು ಇಲ್ಲಿ ಸೇರಿಲ್ಲ. ಕಾರ್ಯಕರ್ತರಿಗಾಗಿ ನಾವು ಪ್ರವಾಸ ಮಾಡುತ್ತಿದ್ದೇವೆ. ಪಕ್ಷದ ಸಂಘಟನೆ ಮಾಡಲು ನಾವು ಹೊರಟಿದ್ದೇವೆ. ನಾವು ಬಿಎಸ್‌ವೈ ನೇತೃತ್ವದಲ್ಲಿ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಇರುವ ತನಕ ಅವರೇ ನಮ್ಮ ಪರಮೋಚ್ಚ ನಾಯಕರು'' ಎಂದು ಹೇಳಿದರು.
''ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ, ಶಕ್ತಿಯೂ ಇಲ್ಲ. ಇಡೀ ರಾಜ್ಯದ ಜನತೆಗೆ ಯಡಿಯೂರಪ್ಪ ಯಾರು ಅಂತ ಗೊತ್ತು. ನಾಲ್ಕು ಬಾರಿ ಸಿಎಂ ಆಗಿದ್ದವರು ಬಿಎಸ್‌ವೈ. ಯಡಿಯೂರಪ್ಪ ವಿರುದ್ಧ ನಾವು ಮಾತನಾಡುವುದು ಸಹಿಸಲ್ಲ. ಸಿದ್ದರಾಮಯ್ಯ ವಿರುದ್ಧ ಕೇಸ್ ಇವೆ, ಆದರೂ ಕಾಂಗ್ರೆಸ್‌ನವರು ಅವರೇ ನಮ್ಮ ನಾಯಕರು ಅಂತ ಹೇಳ್ತಾರೆ. ಆದರೆ, ನಮ್ಮ ಪಕ್ಷದಲ್ಲಿ ಬಿಎಸ್‌ವೈ ವಿರುದ್ಧವೇ ಮಾತನಾಡುತ್ತಾರೆ. ಬಿಎಸ್‌ವೈ 50 ವರ್ಷ ಹೋರಾಟ ಮಾಡಿ ಪಕ್ಷ ಕಟ್ಟಿದ್ದಾರೆ. ಬಿಎಸ್‌ವೈ ವಿರುದ್ಧ ಮಾತನಾಡುವವರ ವಿರುದ್ಧ ಕ್ರಮ ಆಗಬೇಕು. ಯಾರೋ 3-4 ಜನ ಸೇರಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ'' ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಪರಣ್ಣ ಮನುವಳ್ಳಿ, ಬಸವರಾಜ ದಡೇಸುಗೂರ್, ರೂಪಾಲಿ ನಾಯಕ್, ಸುನೀಲ್ ಹೆಗಡೆ, ಹರತಾಳು ಹಾಲಪ್ಪ, ಬಸವರಾಜ್ ನಾಯಕ್, ಪಿಳ್ಳೆ ಮುನಿಸ್ವಾಮಪ್ಪ, ಬೆಳ್ಳಿ ಪ್ರಕಾಶ್ ಸೇರಿ ಹಲವರು ಇದ್ದರು.
ಇದನ್ನೂ ಓದಿ:ಸಂಪುಟ ವಿಸ್ತರಣೆ ಸಂದರ್ಭ ಬಂದಾಗ ಆಗುತ್ತೆ, ಆ ಸಮಯ ಇನ್ನೂ ಬಂದಿಲ್ಲ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ