ಕರ್ನಾಟಕ

karnataka

ETV Bharat / state

ಜಪಾನ್, ದ. ಕೊರಿಯಾದ ಕಂಪನಿಗಳಿಂದ ₹6,450 ಕೋಟಿ ಹೂಡಿಕೆಯ ಬದ್ಧತೆ; 1,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ: ಸಚಿವ ಎಂ ಬಿ ಪಾಟೀಲ್ - Japan and Korean companies - JAPAN AND KOREAN COMPANIES

ಕರ್ನಾಟಕದ ಉನ್ನತ ಮಟ್ಟದ ನಿಯೋಗವು ಜಪಾನ್ ಮತ್ತು ದಕ್ಷಿಣ ಕೊರಿಯಾದ ಎರಡು ವಾರಗಳ ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ₹ 6,450 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಬದ್ದತೆಯನ್ನು ಪಡೆದುಕೊಂಡಿದೆ ಎಂದು ಸಚಿವ ಎಂ. ಬಿ ಪಾಟೀಲ್ ಅವರು ತಿಳಿಸಿದ್ದಾರೆ.

M B Patil
ಸಚಿವ ಎಂ ಬಿ ಪಾಟೀಲ್ (ETV Bharat)

By ETV Bharat Karnataka Team

Published : Jul 10, 2024, 4:38 PM IST

ಬೆಂಗಳೂರು :ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ ಪಾಟೀಲ್ ಅವರ ನೇತೃತ್ವದಲ್ಲಿನ ಕರ್ನಾಟಕದ ಉನ್ನತ ಮಟ್ಟದ ನಿಯೋಗವು ಜಪಾನ್ ಮತ್ತು ದಕ್ಷಿಣ ಕೊರಿಯಾದ ಎರಡು ವಾರಗಳ ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ₹6,450 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಬದ್ಧತೆ ಪಡೆದುಕೊಂಡಿದೆ. ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಉಭಯ ದೇಶಗಳ ಭೇಟಿಯ ಫಲಶ್ರುತಿ ಬಗ್ಗೆ ಬುಧವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಹಂಚಿಕೊಂಡ ಸಚಿವ ಪಾಟೀಲ್ ಅವರು, 'ಜೂನ್ 24ರಿಂದ ಜುಲೈ 5ರವರೆಗಿನ ಉಭಯ ದೇಶಗಳ ಎರಡು ವಾರಗಳ ಭೇಟಿಯ ಸಮಯದಲ್ಲಿ, ಕರ್ನಾಟಕದ ನಿಯೋಗವು ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (ಎಸ್‌ಎಂಇ) ಬಂಡವಾಳ ಹೂಡಿಕೆ ರೋಡ್‌ಷೋಗಳನ್ನು ನಡೆಸಿತು. ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜಕರ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿತು ಎಂದು ಹೇಳಿದರು.

35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗವು, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ - 'ಇನ್ವೆಸ್ಟ್ ಕರ್ನಾಟಕ 2025'ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್‌ ಷೋಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು ಎಂದರು.

ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟರ್ ಕಾರ್ಪೊರೇಷನ್, ಯಮಹಾ ಮೋಟರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟರ್ ಕಾರ್ಪೊರೇಷನ್, ಬ್ರದರ್ ಇಂಡಸ್ಟ್ರೀಸ್, ಶಿಮಾಡ್ಜು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳು ಪ್ರಮುಖವಾಗಿವೆ.

ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್‌ ಗವರ್ನರ್ ಮತ್ತು ಸೋಲ್‌ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪ ಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಯಿತು.

'ದಕ್ಷಿಣ ಕೊರಿಯಾದಲ್ಲಿ ನಡೆದ ಸಭೆಗಳಲ್ಲಿ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌, ಎಲ್‌ಜಿ ಎನರ್ಜಿ ಸೊಲ್ಯೂಷನ್ಸ್, ಎಲ್‌ಎಕ್ಸ್‌ ಎಲೆಕ್ಟ್ರಾನಿಕ್ಸ್, ನಿಫ್ಕೊ ಕೊರಿಯಾ, ಒಸಿಐ ಹೋಲ್ಡಿಂಗ್ಸ್, ಕ್ರಾಫ್ಟನ್‌, ಎಚ್‌ವೈಎಸಿ, ಹುಂಡೈ ಮೋಟರ್ಸ್‌, ವೈಜಿ-1, ಹೊಯ್ಸಂಗ್‌ ಅಡ್ವಾನ್ಸಡ್‌ ಮೆಟೇರಿಯಲ್ಸ್‌ ಮುಂತಾದವು ಸೇರಿವೆʼ ಎಂದು ವಿವರಿಸಿದರು.

ಹೂಡಿಕೆ ಬದ್ಧತೆಗಳು ಮತ್ತು ಒಪ್ಪಂದಗಳ ವಿವರ:

ಒಸಾಕಾ ಗ್ಯಾಸ್ :ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು ₹5000 ಕೋಟಿ (600 ದಶಲಕ್ಷ ಡಾಲರ್‌) ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ತೋರಿದೆ.

ಡಿಎನ್‌ ಸೊಲ್ಯೂಷನ್ಸ್:ಕೊರಿಯಾದ ಮಷಿನ್ ಟೂಲ್ಸ್ ಕಂಪನಿಯಾಗಿರುವ ಡಿಎನ್‌ ಸೊಲ್ಯೂಷನ್ಸ್‌, ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು ₹1000 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

ಅವೊಯಮಾ ಸೈಸಕುಶೊ : ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶೊ, ತುಮಕೂರು ಬಳಿಯ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ₹210 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

ಡೈಕಿ ಆ್ಯಕ್ಸಿಸ್‌, ಹೈವಿಷನ್‌ ಮತ್ತು ಇಎಂಎನ್‌ಐ ಕಂಪನಿ ಲಿಮಿಟೆಡ್‌ : ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಜಂಟಿಯಾಗಿ ₹210 ಮೊತ್ತದ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ.

ಸುಮಿಟೊಮೊ ಹೆವಿ ಇಂಡಸ್ಟ್ರೀಸ್ (ಎಸ್‌ಎಚ್‌ಐ) ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ತೆರೆಯಲು ಸಜ್ಜಾಗಿದ್ದು, 2024ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ. ಈ ತಕ್ಷಣದ ಹೂಡಿಕೆಗಳನ್ನು ಹೊರತುಪಡಿಸಿ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಇಂಧನ ಪರಿಹಾರ ವಲಯಗಳಲ್ಲಿ ₹ 25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯದ ನಿಯೋಗವು ಗುರುತಿಸಿದೆ ಎಂದು ತಿಳಿಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎನ್ ಮಂಜುಳಾ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ, ಮೂಲಸೌಕರ್ಯ ಇಲಾಖೆ ಉಪ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಈ ಸಂದರ್ಭದಲ್ಲಿ ಇದ್ದರು.

ಇದನ್ನೂ ಓದಿ :ಜಪಾನ್‌ ಭೇಟಿಯ 2ನೇ ದಿನ: ಟೋಕಿಯೊದಲ್ಲಿ ಮೊದಲ ರೋಡ್‌ ಶೋ ; ಹೂಡಿಕೆ ಅವಕಾಶಗಳ ಪರಿಚಯ - Day 2 of Japan visit

ABOUT THE AUTHOR

...view details