ಹಾವೇರಿ: 2022ನೇ ವರ್ಷದಲ್ಲಿ ಜಾನುವಾರುಗಳ ಜೀವಕ್ಕೆ ಮಾರಕವಾಗಿ ಕಾಡಿದ್ದ ಚರ್ಮಗಂಟು ರೋಗ ಇದೀಗ ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡಿದೆ. ಕಳೆದೆರಡು ಮೂರು ತಿಂಗಳಿಂದ ಸಣ್ಣದಾಗಿ ಶುರುವಾದ ಈ ರೋಗ ಈಗ ಎಲ್ಲೆಡೆ ವ್ಯಾಪಿಸುತ್ತಿದೆ.
ಪಶು ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯರಿಲ್ಲ. ವೈದ್ಯರಿದ್ದರೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದಾಗಿ ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಜಾನುವಾರುಗಳು ನಲುಗುತ್ತಿವೆ ಎಂಬುದು ರೈತರ ದೂರು.
ಈ ಕುರಿತು ರೈತ ಗೋಣೆಪ್ಪಾ ಕರಿಗಾರ ಮಾತನಾಡಿ, ''ದೇವಹೊಸೂರು ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದ ಸುಮಾರು 200 ಎತ್ತುಗಳು ಸತ್ತಿವೆ. ರೋಗಕ್ಕೆ ಲಸಿಕೆ ಹಾಕಿದ್ದಾರೆ. ಅದರಲ್ಲೇ ಏನೋ ಲೋಪದೋಷಗಳಿವೆ. ಈಗ ಕಾಯಿಲೆ ಹೆಚ್ಚಾಗುತ್ತಿದೆ. ಹೀಗಾಗಿ ಎತ್ತುಗಳು ಸತ್ತಿರುವ ರೈತರಿಗೆ ಸರ್ಕಾರ ಏನಾದ್ರೂ ಪರಿಹಾರ ಒದಗಿಸಬೇಕು'' ಎಂದು ಮನವಿ ಮಾಡಿದ್ದಾರೆ.
ಹಾವೇರಿ ಪಶುಪಾಲನೆ ಮತ್ತು ಪಶು ಇಲಾಖೆ ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ವಿ.ಸಂತಿ ಪ್ರತಿಕ್ರಿಯಿಸಿ, "2022ರ ಆಗಸ್ಟ್ನಲ್ಲಿ ಈ ರೀತಿಯ ಪ್ರಕರಣ ಮೊದಲು ಕಂಡುಬಂದಿತ್ತು. ಆಗ ರೋಗ ಹೊಸದು. ಅದಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇರಲಿಲ್ಲ. 25,000 ಜಾನುವಾರುಗಳಿಗೆ ರೋಗ ತಗುಲಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಲಂಪಿಸ್ಕಿನ್ ತಡೆಯುವ ಗೋಟ್ ಪಾಕ್ಸ್ ಲಸಿಕೆ ಹಾಕಿಸಿತ್ತು. ಮೃತಪಟ್ಟ 2,994 ಜಾನುವಾರುಗಳಿಗೆ ಸರ್ಕಾರ ಪರಿಹಾರ ನೀಡಿತ್ತು" ಎಂದರು.