ಕಾರವಾರ(ಉತ್ತರ ಕನ್ನಡ):ಶಿರೂರು ಗುಡ್ಡ ಕುಸಿತದಿಂದ ಅಂಕೋಲಾದ ಗಂಗಾವಳಿ ನದಿಯಲ್ಲಿ ಬಿದ್ದಿರುವ ಅವಶೇಷಗಳ ಪತ್ತೆ ಕಾರ್ಯ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ನೀರಿನಾಳದಲ್ಲಿ ಲಾರಿಯ ಇಂಜಿನ್, ಸ್ಕೂಟಿ ಮತ್ತು ಮೂಳೆಯೊಂದು ಸಿಕ್ಕಿದ್ದು, ಅದನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.
ಮೂರನೇ ದಿನದ ಡ್ರೆಜ್ಜರ್ ಕಾರ್ಯಾಚರಣೆಯಲ್ಲಿ ಮೂಳೆ ದೊರೆತಿದೆ. ಇದು ನಾಪತ್ತೆಯಾದ ಮೂವರಲ್ಲಿ ಯಾರದ್ದೆಂದು ತಿಳಿಯಲು ಡಿಎನ್ಎ ಟೆಸ್ಟ್ಗೆ ಕಳುಹಿಸಲಾಗಿದೆ.
ಕಾರ್ಯಾಚರಣೆ ವೇಳೆ ಪತ್ತೆಯಾದ ಲಾರಿಯ ಇಂಜಿನ್ ಬೆಂಜ್ ಲಾರಿಯದ್ದೋ ಅಥವಾ ಕೊಚ್ಚಿ ಹೋದ ಟ್ಯಾಂಕರ್‌ನದ್ದೋ ಎಂಬುದು ಖಚಿತವಾಗಿಲ್ಲ. ಶನಿವಾರದ ಕಾರ್ಯಾಚರಣೆಯಲ್ಲಿ ಟ್ಯಾಂಕರ್‌ನ ಕ್ಯಾಬಿನ್‌ನ ಭಾಗ ಹಾಗೂ ಟ್ಯಾಂಕರ್‌ನ ಎದುರಿನ ಎರಡು ಟಯರ್‌ಗಳು ಕಂಡುಬಂದಿದ್ದವು.
ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯೆ (ETV Bharat) ಗೋವಾದಿಂದ ತರಿಸಲಾದ ಬಾರ್ಜ್ ನಿಧಾನವಾಗಿ ಕಾರ್ಯಾಚರಿಸುತ್ತಿದೆ. ದಿನಕ್ಕೆ ಒಂದೆರಡು ಬಾರ್ಜ್ ಮಾತ್ರ ಹೂಳು ತೆಗೆದು ಹಾಕಲು ಸಾಧ್ಯವಾಗುತ್ತಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ತಂಡ ಭಾನುವಾರ ಬೆಂಜ್ ಲಾರಿಯೊಳಗಿದೆ ಎನ್ನಲಾದ ಅಕೇಶಿಯಾ ಮರದ ತುಂಡುಗಳನ್ನು ನೀರಿನಾಳದಿಂದ ದಡಕ್ಕೆ ತಂದಿತು. ಅಲ್ಲದೇ, ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದ ನೀರಿನಾಳದಲ್ಲಿ ಸ್ಕೂಟಿ ಒಂದನ್ನು ಪತ್ತೆ ಮಾಡಿದ್ದು, ನದಿಯಿಂದ ಮೇಲಕ್ಕೆತ್ತಲಾಗಿದೆ.
ಶಿರೂರು ಗುಡ್ಡ ಕುಸಿತ: ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕ ಮೂಳೆ (ETV Bharat) ಕಾರ್ಯಾಚರಣೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, "ಗಂಗಾವಳಿ ನದಿಯಲ್ಲಿ ಮೃತದೇಹ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಯತ್ನ ಮಾಡಲಾಗುತ್ತಿದೆ. ಈಗ 10 ದಿನಗಳ ಕಾಲ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಕೆಲವು ವಸ್ತುಗಳು ಸಿಗುತ್ತಿವೆ. ಇದಕ್ಕಿಂತ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಲಾರಿ, ನಾಪತ್ತೆಯಾದವರ ಕುರುಹು ಸಿಗಬಹುದು ಎಂಬ ನಿರೀಕ್ಷೆ ಇದೆ. ಇಲ್ಲದಿದ್ದರೆ ಕಾರ್ಯಾಚರಣೆಯನ್ನು ಬಂದ್ ಮಾಡುವ ಯೋಚನೆ ಇದೆ" ಎಂದು ತಿಳಿಸಿದರು.
ಇದನ್ನೂ ಓದಿ:ಕಾರವಾರ: ಮೃತದೇಹವನ್ನು ಕಟ್ಟಿಗೆಗೆ ಕಟ್ಟಿ ಹೊತ್ತುಕೊಂಡು ಊರಿಗೆ ಸಾಗಿಸಿದ ಗ್ರಾಮಸ್ಥರು - No Road Facilities