ಬೆಂಗಳೂರು:ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ರಾಜ್ಯದ 10 ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ನಗದು, ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಪೊಲೀಸರು ಮಂಡ್ಯ, ತುಮಕೂರು, ಬಳ್ಳಾರಿ, ವಿಜಯನಗರ, ಚಾಮರಾಜನಗರ, ಚಿಕ್ಕಮಗಳೂರು, ಕೊಪ್ಪಳ, ಮೈಸೂರು, ಮಂಗಳೂರು ಮತ್ತು ಹಾಸನ ಜಿಲ್ಲೆಯ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ 41ಕ್ಕೂ ಹೆಚ್ಚು ಸ್ಥಳಗಳ ಮೇಲೆ 41 ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಈ ಬಗ್ಗೆ ಲೋಕಾಯುಕ್ತರು ಪ್ರಕಟಣೆ ಮೂಲಕ ದಾಳಿಯ ಎಲ್ಲ ವಿವರವನ್ನು ನೀಡಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳ ಪೈಕಿ ಮಂಡ್ಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್ ಆರ್ ಹರ್ಷ ಬಳಿ 4.50 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ. ಇನ್ನು ಅರಣ್ಯಾಧಿಕಾರಿ ರೇಣುಕಮ್ಮ ಅವರ ಬಳಿ 2.77 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ವಿಜಯನಗರದ ಜೆಸ್ಕಾಂ ಅಧಿಕಾರಿ ಆರ್.ಆರ್.ಭಾಸ್ಕರ್ ಬಳಿಕ ಎಂಟು ನಿವೇಶನಗಳು, ಮೂರು ಮನೆಗಳು ಇರುವುದು ಪತ್ತೆಯಾಗಿದೆ. ಬಳ್ಳಾರಿಯ ಸಾತ್ನಕೋತ್ತರ ಕೇಂದ್ರದ ನಿರ್ದೇಶಕ ಬಿ.ರವಿ ಬಳಿಕ ಏಳು ನಿವೇಶನಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಹೇಳಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ರವಿಕುಮಾರ್, ಚಿಕ್ಕಮಗಳೂರು ಜಿಲ್ಲೆಯ ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಆರ್.ನೇತ್ರಾವತಿ, ವಿಜಯನಗರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಆರ್‌ಎಫ್‌ಒ ರೇಣುಕಮ್ಮ, ಮೈಸೂರು ಜಿಲ್ಲೆಯಲ್ಲಿ ಮೂಡಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎನ್.ಯಜ್ಞೇಂದ್ರ, ಮಂಗಳೂರಿನಲ್ಲಿ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಶಾಂತ ಕುಮಾರ್, ಹಾಸನ ಜಿಲ್ಲೆಯಲ್ಲಿ ಆಹಾರ ನಿರೀಕ್ಷಕ ಜಿ.ಪಿ.ಜಗನ್ನಾಥ ಅವರಿಗೆ ಸೇರಿದ ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಇಂದು ಬಿಡುಗಡೆ ಮಾಡಿರುವ ಪ್ರೆಸ್ ನೋಟ್ನಲ್ಲಿ ತಿಳಿಸಿದ್ದಾರೆ.
ದಾಳಿಯ ವೇಳೆ ಪತ್ತೆಯಾಗಿದ್ದೇನು?: ತುಮಕೂರಿನ ಮಧುಗಿರಿಯ ಕೆಆರ್‌ಐಡಿಎಲ್ ಸಹಾಯಕ ಇಂಜಿನಿಯರ್ ಎ ಹನುಮಂತರಾಯಪ್ಪ ಅವರಿಗೆ ಸೇರಿದ ಆರು ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಸಿ. ಮೂರು ಮನೆ, ಎಂಟು ಎಕರೆ ಕೃಷಿ ಭೂಮಿ. ಒಟ್ಟು 2.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. 40 ಸಾವಿರ ರೂ. ನಗದು, 8.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 14.80 ಲಕ್ಷ ರೂ. ಮೌಲ್ಯದ ವಾಹನಗಳು, ಎರಡು ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, ಒಟ್ಟು 25.30 ಲಕ್ಷ ರೂ. ಮೌಲ್ಯದ ಚರಾಸ್ತಿ ಲಭ್ಯ. ಒಟ್ಟಾರೆ ಆಸ್ತಿ ಮೌಲ್ಯ 2.55 ಕೋಟಿ ರು. ಆಗಿದೆ.
ಮಂಡ್ಯದ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್ ಆರ್ ಹರ್ಷ ಅವರಿಗೆ ಸೇರಿದ ಆರು ಸ್ಥಳಗಳಲ್ಲಿ ತಪಾಸಣೆ ಮಾಡಲಾಗಿದೆ. ಈ ವೇಳೆ, ಮೂರು ನಿವೇಶನ, ಎರಡು ಮನೆ, ಕೃಷಿ ಭೂಮಿ ಸೇರಿ 1.68 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ಲಭ್ಯವಾಗಿದೆ. 1.50 ಲಕ್ಷ ರೂ. ನಗದು, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 55 ಲಕ್ಷ ರೂ. ಮೌಲ್ಯದ ವಾಹನಗಳು, 2.15 ಕೋಟಿ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು ಲಭ್ಯವಾಗಿದೆ. ಒಟ್ಟು 2.82 ಕೋಟಿ ರೂ. ಮೌಲ್ಯದ ಚರಾಸ್ತಿ ಲಭ್ಯ. ಒಟ್ಟಾರೆ ಆಸ್ತಿ ಮೌಲ್ಯ 4.50 ಕೋಟಿ ರೂ. ಆಗಿದೆ.
ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಬಿ.ರವಿ. ಅವರಿಗೆ ಸೇರಿದ ಮೂರು ಸ್ಥಳಗಳಲ್ಲಿ ಪರಿಶೀಲನೆ ಮಾಡಲಾಗಿದ್ದು. ಏಳು ನಿವೇಶನ, ಎರಡು ಮನೆ ಸೇರಿ 1.57 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 59,800 ಲಕ್ಷ ರೂ. ನಗದು, 9.12 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 23.30 ಲಕ್ಷ ರೂ. ಮೌಲ್ಯದ ವಾಹನಗಳು, 26 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು ಸಿಕ್ಕಿವೆ. ಒಟ್ಟು59.02 ಲಕ್ಷ ರೂ. ಮೌಲ್ಯದ ಚರಾಸ್ತಿ ಸಿಕ್ಕಿವೆ. ಒಟ್ಟಾರೆ ಆಸ್ತಿ ಮೌಲ್ಯ 2.16 ಕೋಟಿ ರೂ. ಆಗಿದೆ.
ವಿಜಯನಗರ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಆರ್.ಭಾಸ್ಕರ್ ಅವರಿಗೆ ಸೇರಿದ ಐದು ಸ್ಥಳಗಳಲ್ಲಿ ಶೋಧ ಕಾರ್ಯ. ಎಂಟು ನಿವೇಶನ, ಮೂರು ಮನೆ, ಎರಡು ಎಕರೆ ಕೃಷಿ ಭೂಮಿ ಸೇರಿ 1.40 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. 76,550 ನಗದು, 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 12.10 ಲಕ್ಷ ರೂ. ಮೌಲ್ಯದ ವಾಹನಗಳು, 1.63 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ. ಒಟ್ಟು ೩೪.೪೯ ಲಕ್ಷ ರೂ. ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಒಟ್ಟಾರೆ ಆಸ್ತಿ ಮೌಲ್ಯ 1.74 ಆಗಿದೆ.