ಕರ್ನಾಟಕ

karnataka

ETV Bharat / state

ಬಿಬಿಎಂಪಿ ಕಚೇರಿಯಲ್ಲಿ ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರು: ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು - LOKAYUKTA OFFICERS INSPECTION

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ 54 ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪ ಲೋಕಾಯುಕ್ತರು ಸೇರಿ ಇತರ ಅಧಿಕಾರಿಗಳು ಏಕಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

lokayukta inspected in bbmp office
ಬಿಬಿಎಂಪಿ ಕಚೇರಿಯಲ್ಲಿ ಉಪ ಲೋಕಾಯುಕ್ತರಿಂದ ಪರಿಶೀಲನೆ (ETV Bharat)

By ETV Bharat Karnataka Team

Published : Jan 11, 2025, 7:42 AM IST

ಬೆಂಗಳೂರು:ರಾಜಧಾನಿಯ ಬಿಬಿಎಂಪಿಯ ಬಹುತೇಕ ಆರ್‌ಓ ಮತ್ತು ಎಆರ್‌ಓ ಕಚೇರಿಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಲೋಪಗಳು ಕಂಡುಬಂದ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ 54 ಕಚೇರಿಗಳ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪ ಲೋಕಾಯುಕ್ತರು ದಾಳಿಯಲ್ಲಿ ಭಾಗಿಯಾಗಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಶುಕ್ರವಾರ ಮಧ್ಯಾಹ್ನದಿಂದ ನಡೆಯುತ್ತಿದ್ದ ತಪಾಸಣೆಯು ಹಲವು ಕಚೇರಿಗಳಲ್ಲಿ ತಡರಾತ್ರಿವರೆಗೂ ಜರುಗಿತು. ಪರಿಶೀಲನೆ ವೇಳೆ ಬಿಬಿಎಂಪಿ ಕಚೇರಿಗಳಲ್ಲಿ ಹಲವು ಲೋಪಗಳು ಕಂಡು ಬಂದಿದೆ.

ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಹೆಬ್ಬಾಳ ಸಬ್ ಡಿವಿಷನ್ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆೆಯಲ್ಲಿರುವ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಆರ್‌ಓ ಕಚೇರಿಗೆ ಖುದ್ದು ಭೇಟಿ ನೀಡಿದ್ದರು. ಕಚೇರಿಯಲ್ಲಿ ಯಾವುದೇ ವಹಿಗಳನ್ನು ಅಂದರೆ ಹಾಜರಾತಿ ವಹಿ, ನಗದು ಘೋಷಣಾ ವಹಿ, ಚಲನಾ-ವಲನಾ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಪತ್ತೆೆಯಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರ ಹೆಬ್ಬಾಳ ಸಬ್ ಡಿವಿಷನ್ ಕಚೇರಿಯಲ್ಲಿ ಒಟ್ಟು 22 ಸಿಬ್ಬಂದಿಯಿದ್ದು, ಅದರಲ್ಲಿ 21 ಮಂದಿ ಮಾತ್ರ ಹಾಜರಾತಿ ವಹಿಗೆ ಸಹಿ ಮಾಡಿದ್ದು, ಕಚೇರಿಯಲ್ಲಿ ಕೇವಲ ಮೂರು ಜನ ಮಾತ್ರ ಇದ್ದರು. ಎಆರ್‌ಓ ಸಹ ಕಚೇರಿಯಲ್ಲಿ ಹಾಜರಿರಲಿಲ್ಲ. ಕರೆ ಮಾಡಿ ಕೇಳಿದಾಗ ಬೆಳಗ್ಗೆೆ ಕಚೇರಿಗೆ ಬಂದು ನಂತರ ಮುಖ್ಯ ಕಚೇರಿಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಆದರೆ ಆ ಬಗ್ಗೆೆ ಚಲನ - ವಲನ ವಹಿಯಲ್ಲಿ ನಮೂದು ಮಾಡಿಲ್ಲ. ಎಆರ್‌ಓ ಅವರು ಬೆಳಗ್ಗೆೆ ಕಚೇರಿಗೆ ಬಂದು ಮಧ್ಯಾಹ್ನ ತನಕ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಹಾಜರಾತಿ ವಹಿಯಲ್ಲಿ ಅವರು ಸಹಿ ಮಾಡಿಲ್ಲ. ಇದೇ ಕಚೇರಿಯಲ್ಲಿ ನಗದು ವಹಿ ಮತ್ತು ಚಲನಾ-ವಲನಾ ವಹಿಗಳನ್ನು ಆಗಸ್ಟ್- 2023ರ ನಂತರ ನಿರ್ವಹಣೆ ಮಾಡಿಲ್ಲ. ಈ ಬಗ್ಗೆೆ ಹಾಜರಿದ್ದ ಸಿಬ್ಬಂದಿಯು ಯಾವುದೇ ಸಮರ್ಪಕ ಉತ್ತರ ನೀಡದಿರುವುದು ತಪಾಸಣೆಯಲ್ಲಿ ಕಂಡುಬಂದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಉಪ ಲೋಕಾಯುಕ್ತ ನ್ಯಾ.ವೀರಪ್ಪ (ETV Bharat)

ರಿಜಿಸ್ಟರ್ ಬುಕ್​ನಲ್ಲಿ ಎಂಟ್ರಿ ಇಲ್ಲ:ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಲೋಕಾಯುಕ್ತರಾದ ನ್ಯಾ.ವೀರಪ್ಪ, ''ಬಿಬಿಎಂಪಿ ಬಗ್ಗೆ ಹಲವು ದೂರುಗಳು ಬಂದಿದ್ದವು. ಬೆಂಗಳೂರಿನಾದ್ಯಂತ 50ಕ್ಕಿಂತ ಹೆಚ್ಚು ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳು ಇರಲಿಲ್ಲ. ಎಲ್ಲಿ ಹೋದರೂ ಎಂದು ಕೇಳಿದರೆ, ವೈಕುಂಠ ಏಕಾದಶಿ ಪೂಜೆಗೆ ಹೋಗಿರುವ ಬಗ್ಗೆ ಉತ್ತರ ಬಂದಿದೆ. ರಿಜಿಸ್ಟರ್ ಬುಕ್​ನಲ್ಲಿ ಎಂಟ್ರಿ ಇಲ್ಲ, ಯಾರು ಯಾವಾಗ ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಏನು ಕೇಳಿದರೂ, ಫುಲ್ ಸೈಲೆಂಟ್ ಆಗಿ ನಿಂತುಕೊಳ್ಳುತ್ತಾರೆ'' ಎಂದರು.

ತಾಯಿ ಬದಲು ಮಗ ಕೆಲಸಕ್ಕೆೆ ಹಾಜರು:''ಸೌತ್ ಎಂಡ್​ ಸರ್ಕಲ್ ಬಿಬಿಎಂಪಿ ಕಚೇರಿಗೆ ತೆರಳಿದಾಗ, ಕೇಸ್ ವರ್ಕರ್ ಕವಿತಾ ಬದಲು ಅವರ ಮಗ ನವೀನ್ ಹಾಜರಾಗಿರುವುದು ಕಂಡು ಬಂದಿತ್ತು. ಮಗನ ಜೊತೆ ಸಹಾಯಕ್ಕೆೆ ನಿಯಮ ಉಲ್ಲಂಘಿಸಿ ಗೀತಾ ಎಂಬ ಸಹಾಯಕಿಯನ್ನು ಕವಿತಾ ನೇಮಿಸಿರುವುದು ಬೆಳಕಿಗೆ ಬಂದಿದೆ. ಕಚೇರಿಗೆ ದಾಳಿ ನಡೆಸಿದ ವೇಳೆ ನವೀನ್ ಅವರನ್ನು ಪ್ರಶ್ನಿಸಿದಾಗ ಆತ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ನೇರವಾಗಿ ಕವಿತಾಗೆ ಕರೆ ಮಾಡಿಸಿ ವಿಚಾರಿಸಿದ್ದೇನೆ. ತನ್ನ ತಾಯಿಗೆ ಕಂಪ್ಯೂಟರ್​ ಬಗ್ಗೆ ಗೊತ್ತಿಲ್ಲ, ನನಗೆಲ್ಲವೂ ಗೊತ್ತು ನಾನೇ ಎಲ್ಲವನ್ನೂ ನಿರ್ವಹಣೆ​ ಮಾಡುತ್ತೇನೆ ಎಂದು ಮಗ ಹೇಳುತ್ತಾನೆ. ಆತ ಯಾರ ಅನುಮತಿಯನ್ನೂ ಪಡೆದಿಲ್ಲ. ಆತನೇ ಪ್ರಮುಖ ಅಧಿಕಾರಿ ಎಂಬಂತೆ ಧಿಮಾಕಿನಿಂದ ವರ್ತಿಸುತ್ತಿದ್ದಾನೆ. ನಮಗೆ ಇದೆಲ್ಲದರಿಂದ ಭಾರಿ ಶಾಕ್​ ಆಗಿದೆ'' ಎಂದು ತಿಳಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ (ETV Bharat)

''ಎಆರ್​ಓ ಸುಜಾತ ಎಂಬವರು ಮಧ್ಯಾಹ್ಬ ಮೂರುವರೆಗೆ ಆಫೀಸ್​​ಗೆ ಬಂದಿದ್ದಾರೆ. ಬಿಬಿಎಂಪಿ ಕಚೇರಿಗಳಿಗೆ ಅಪ್ಪ, ಅಮ್ಮ ಯಾರು ಇಲ್ಲವೇ? ಕಚೇರಿಯನ್ನು ಅಧಿಕಾರಿಗಳು ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ‌. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕರೆಯಿಸುತ್ತೇವೆ. ಸಾಕಷ್ಟು ಜನ ಅಧಿಕಾರಿಗಳು ವೈಕುಂಠ ಏಕಾದಶಿ ಪೂಜೆಗೆ ಹೋಗಿದ್ದಾರೆ. ಎಲ್ಲದರ ಬಗ್ಗೆ ಸರ್ಕಾರದ ಗಮನ ತಂದು ಸೊಮೊಟೊ ಕೇಸ್ ದಾಖಲಿಸುತ್ತೇವೆ'' ಎಂದು ನ್ಯಾ.ವೀರಪ್ಪ ಮಾಹಿತಿ ನೀಡಿದರು.

ಲಾಲ್ ಬಾಗ್ ರಸ್ತೆೆಯ ಕಚೇರಿ ಭೇಟಿ ವೇಳೆ ಅಧಿಕಾರಿಗಳೇ ಇರಲಿಲ್ಲ. ಅಧಿಕಾರಿಗಳೆಲ್ಲಾ ದೇವಸ್ಥಾನಕ್ಕೆೆ ಹೋಗಿದ್ದಾರೆ ಎಂದು ಸಹಾಯಕರು ಹೇಳಿದ್ದರು. ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆೆ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಪ್ರಶ್ನಿಸಿದ ಪ್ರಸಂಗವೂ ನಡೆಯಿತು.

ಬಿಬಿಎಂಪಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ (ETV Bharat)

ಎಂಜಿನಿಯರ್ ಬಳಿ ದಾಖಲೆ ಇಲ್ಲದ ಹಣ ಪತ್ತೆೆ:ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿಯೂ ಸಹ ಬಹುತೇಕ ಅಧಿಕಾರಿ ಮತ್ತು ಸಿಬ್ಬಂದಿ ಗೈರು ಹಾಜರಿರುವುದು ಕಂಡುಬಂದಿದೆ. ಬಿಬಿಎಂಪಿ ಕೆ.ಆರ್.ಪುರಂ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ತಪಾಸಣೆ ನಡೆಸಿದಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಬಳಿ ಸುಮಾರು 50 ಸಾವಿರ ರೂ. ನಗದು ಹಾಗೂ ಸಹಾಯಕ ಅಭಿಯಂತರರ ಬಳಿ 43 ಸಾವಿರ ರೂ. ಪತ್ತೆೆಯಾಗಿದೆ. ಈ ಸಂಬಂಧ ಅವರು ನಗದು ಘೋಷಣಾ ವಹಿಯಲ್ಲಿ ತಮ್ಮ ಬಳಿ ಇರುವ ಹಣದ ಬಗ್ಗೆೆ ನಮೂದು ಮಾಡಿಲ್ಲ. ಸದರಿ ನಗದಿನ ಬಗ್ಗೆೆ ಸಮಂಜಸ ಉತ್ತರ ನೀಡಿಲ್ಲ. ಆ ನಗದನ್ನು ಮಹಜರು ಮಾಡಿ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಾಗಿ ವರದಿ ನೀಡಲು ಲೋಕಾಯುಕ್ತರು ಸೂಚಿಸಿದ್ದಾರೆ.

ಇದನ್ನೂ ಓದಿ:ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಕೃತ್ಯಕ್ಕೆ ಪ್ರಚೋದನೆ ಪ್ರಕರಣ: ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ NIA

ABOUT THE AUTHOR

...view details