ಬೆಂಗಳೂರು: ನಾಗರಿಕ ಸೇವಾ ನಿಯಮ 14ಎ ಅಡಿ ಲೋಕಾಯುಕ್ತ, ಉಪ ಲೋಕಾಯುಕ್ತರು ಸರ್ಕಾರಿ ನೌಕರರ ವಿರುದ್ಧ ವಿಚಾರಣೆಗೆ ಕೇವಲ ಶಿಫಾರಸು ಮಾಡಬಹುದೇ ಹೊರತು, ವಿಚಾರಣೆ ನಡೆಸುವ ಹೊಣೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಿರಿಯ ಪರಿಸರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಜಿ.ಯತೀಶ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎನ್. ಎಸ್. ಸಂಜಯಗೌಡ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೇ, ತನ್ನ ಸಿಬ್ಬಂದಿ ವಿರುದ್ಧದ ಶಿಸ್ತು ಕ್ರಮದ ವಿಚಾರಣೆಯನ್ನು ಯಾರಿಗೆ ನೀಡಬೇಕೆಂಬ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇರಲಿದೆ ಎಂದು ಪೀಠ ತಿಳಿಸಿದೆ.
ಸಿಸಿಎ ನಿಯಮ 14ಎ ಪ್ರಕಾರ ಸರ್ಕಾರ ತನ್ನ ಸಿಬ್ಬಂದಿ ವಿರುದ್ಧದ ದುರ್ನಡತೆ ಆರೋಪಗಳ ಬಗ್ಗೆ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರಿಂದ ವಿಚಾರಣೆಗೆ ಆದೇಶ ನೀಡಬಹುದು ಮತ್ತು ಆ ನಂತರ ನಿಯಮ 12ರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರು, ಮಾಲಿನ್ಯ ನಿಯಂತ್ರಣ ಮಂಡಳಿ ಉದ್ಯೋಗಿಯಾಗಿದ್ದು, ತನ್ನ ವಿರುದ್ಧ ಸಿಸಿಎ ನಿಯಮ 14 ಎ ಅನ್ವಯಿಸಲಾಗದು. ಏಕೆಂದರೆ ಮಂಡಳಿಗೆ ತನ್ನದೇ ಆದ ವೃಂದ ಮತ್ತು ನೇಮಕ ನಿಯಮಗಳಿವೆ. ಸಿಸಿಎ ನಿಯಮ 14ಎ ಅಡಿ ಸರ್ಕಾರ ತನ್ನ ಸಿಬ್ಬಂದಿ ವಿರುದ್ಧದ ವಿಚಾರಣೆಯನ್ನು ಮಾತ್ರ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತಕ್ಕೆ ವಹಿಸುವ ಅಧಿಕಾರವಿದೆಯೇ ಹೊರತು, ಸ್ವಾಯತ್ತ ಮಂಡಳಿಗಳ ಸಿಬ್ಬಂದಿ ವಿರುದ್ಧವಲ್ಲ ಎಂದು ಹೇಳಿದ್ದರು. ಮಂಡಳಿ ಪರ ವಕೀಲರು ಈ ವಾದವನ್ನು ಒಪ್ಪಿಕೊಂಡಿದ್ದರು.
ಅರ್ಜಿದಾರರ ವಿಚಾರ ಪರಿಶೀಲಿಸಿ ವಿವರವಾದ ವರದಿ ಪಡೆಯಲಾಗಿದೆ. ಅದರಂತೆ ಅರ್ಜಿದಾರರ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಹಾಗಾಗಿ ಸರ್ಕಾರ ಇಲಾಖಾ ವಿಚಾರಣೆ ಕೈಬಿಡುವುದು ಸೂಕ್ತ ಎಂದು ತಿಳಿಸಿತ್ತು. ಆದರೆ, ಸರ್ಕಾರಿ ವಕೀಲರು, ಸರ್ಕಾರಕ್ಕೆ ತನ್ನ ಉದ್ಯೋಗಿಗಳ ವಿರುದ್ಧ ಮಾತ್ರವಲ್ಲ, ಸಾಂಸ್ಥಿಕ ಮಂಡಳಿಗಳ ನೌಕರರ ವಿರುದ್ಧವೂ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಂದ ಇಲಾಖೆ ವಿಚಾರಣೆ ನಡೆಸುವ ಅಧಿಕಾರವಿದೆ ಎಂದು ವಾದ ಮಂಡಿಸಿದ್ದರು.
ಅಲ್ಲದೆ, ಸಿಸಿಎ ನಿಯಮದಡಿ ಸರ್ಕಾರಿ ಉದ್ಯೋಗಿ ಎಂದರೆ, ಅವರು ರಾಜ್ಯ ಸರ್ಕಾರದ ನಾಗರಿಕ ಸೇವಾ ಸದಸ್ಯರು ಮಾತ್ರವಲ್ಲದೇ, ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ನಾಗರಿಕ ಹುದ್ದೆಗಳಲ್ಲಿರುವವರಿಗೆ ಅನ್ವಯಿಸುತ್ತದೆ ಎಂದೂ ಹೇಳಿತ್ತು. ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರಡಿ ತನ್ನ ಅಧಿಕಾರ ಬಳಸಿ ತಮ್ಮ ವಿರುದ್ಧ ಉಪ ಲೋಕಾಯುಕ್ತರಿಂದ ಇಲಾಖಾ ವಿಚಾರಣೆಗೆ ಆದೇಶ ನೀಡಿ 2023ರ ಸೆ.7ರಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿದ್ದರು.
ಇದನ್ನೂ ಓದಿ:ಉಗಾಂಡ ಮಗು ದತ್ತು ಪಡೆಯಲು ಭಾರತೀಯ ದಂಪತಿಗೆ ನೆರವಾದ ಹೈಕೋರ್ಟ್ - High Court