ಕೋಲಾರ:ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೋಲಾರ ಕಾಂಗ್ರೆಸ್ನಲ್ಲಿದ್ದ ಎರಡು ಗುಂಪುಗಳ ನಡುವಿನ ಪ್ರತಿಷ್ಠೆ, ಬಣ ರಾಜಕೀಯ ತಾರಕಕ್ಕೇರಿತ್ತು. ಬಣ ರಾಜಕೀಯ ಶಮನ ಮಾಡಲು ಹೈಕಮಾಂಡ್ ಕೊನೆಗೂ ಎರಡೂ ಬಣಗಳನ್ನು ಹೊರತು ಪಡಿಸಿ ಮೂರನೇ ಅಭ್ಯರ್ಥಿಗೆ ಮಣೆ ಹಾಕಿದೆ. ಇಲ್ಲಿ ಸಚಿವ ಕೆಎಚ್ ಮುನಿಯಪ್ಪಗೆ ತೀವ್ರ ಹಿನ್ನಡೆಯಾಗಿದ್ದು, ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೈ ತಪ್ಪಿದೆ.
ಕೋಲಾರ ಬಣ ರಾಜಕೀಯಕ್ಕೆ ಟಕ್ಕರ್ ಕೊಟ್ಟಿರುವ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿ ಅಭ್ಯರ್ಥಿಯಾಗಿ ಬೆಂಗಳೂರು ಮೂಲದ ಗೌತಮ್ ಹೆಸರು ಘೋಷಣೆ ಮಾಡಿದೆ. ಕೊನೆಗೂ ಮೇಲುಗೈ ಸಾಧಿಸಿದ ರಮೇಶ್ ಕುಮಾರ್ ಬಣದ ಒತ್ತಾಯಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಹೈ ಕಮಾಂಡ್ 7 ಬಾರಿ ಸಂಸದರಾಗಿ, 2 ಬಾರಿ ಕೇಂದ್ರ ಸಚಿವರಾಗಿ, ಸದ್ಯ ಆಹಾರ ಸಚಿವರಾಗಿರುವ ಮುನಿಯಪ್ಪ ಅವರ ಬೇಡಿಕೆ ಮನ್ನಿಸಿಲ್ಲ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ನಲ್ಲಿ ತಮ್ಮ ಪ್ರಭಾವ ಹೊಂದಿದ್ದ ಮುನಿಯಪ್ಪಗೆ ದೊಡ್ಡ ಹಿನ್ನಡೆ ಇದಾಗಿದೆ.
ಈಗಾಗಲೆ ಕಾಂಗ್ರೆಸ್‌ನ ಹಲವು ನಾಯಕರು ಕುಟುಂಬಕ್ಕೆ ಟಿಕೆಟ್ ಕೊಡಿಸಿದ್ದಾರೆ. ಅದರಂತೆ ತನ್ನ ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಪ್ಲಾನ್ ಮಾಡಿದ್ರು. ಆದರೆ, ಕೆಹೆಚ್ ಮುನಿಯಪ್ಪ ಇದರಲ್ಲಿ ಸಕ್ಸಸ್ ಆಗಿಲ್ಲ. ರೆಬಲ್ ಶಾಸಕರ ಒತ್ತಡಕ್ಕೆ ಮಣಿದ ಹೈ ಕಮಾಂಡ್ 2 ಬಣಗಳನ್ನು ಮನವೊಲಿಸುವ ಬದಲಾಗಿ ಮೂರನೆಯವರಿಗೆ ಮಣೆ ಹಾಕಿದೆ.