ಬೆಂಗಳೂರು:ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ನಿಷೇಧಾಜ್ಞೆ ಜಾರಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ವಸಂತ ನಗರದ ಮೌಂಟ್ ಕಾರ್ಮೆಲ್ ಕಾಲೇಜು, ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿರುವ ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಜಯನಗರದ 4ನೇ ಟಿ ಬ್ಲಾಕ್‌ನ ಎಸ್.ಎಸ್.ಎಂ.ಆರ್.ವಿ ಕಾಲೇಜು ಬಳಿ ಬಂದೋಬಸ್ತ್ ವಹಿಸಲಾಗಿದ್ದು, ನಗರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಮದ್ಯ ಮಾರಾಟ ನಿಷೇಧ:ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಯಾವುದೇ ರೀತಿ ಗುಂಪು ಸೇರುವುದು, ವಿಜಯೋತ್ಸವ ಮೆರವಣಿಗೆ ಹಾಗೂ ಸಭೆ-ಸಮಾರಂಭ ಆಯೋಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೇ ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಇರುವುದಿಲ್ಲ.
ಬೆಂಗಳೂರು ಪೊಲೀಸ್ ಘಟಕದಿಂದ ಒಟ್ಟು 1,524 ಅಧಿಕಾರಿಗಳು ಹಾಗೂ ಸಿಬ್ಬಂದಿ, 13 ಸಶಸ್ತ್ರ ತುಕಡಿಗಳು, 4 ಕ್ಯೂಆರ್‌ಟಿ ತಂಡಗಳು ಎಣಿಕಾ ಕೇಂದ್ರಗಳ ಸುತ್ತಮುತ್ತ ಬಂದೋಬಸ್ತ್ ವಹಿಸಲಿವೆ. ಎಣಿಕೆ ಕೇಂದ್ರದ ಸುತ್ತಮುತ್ತಲೂ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ 400ಕ್ಕೂ ಹೆಚ್ಚು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಈಗಾಗಲೇ ಸಿವಿಲ್ ಮತ್ತು ಸಿಎಆರ್ ಒಳಗೊಂಡಂತೆ 516 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು 1 ಸಿಎಪಿಎಫ್ ತುಕಡಿ (92 ಜನ) ಮೂರು ಪಾಳಿಯಲ್ಲಿ ಸ್ಟ್ರಾಂಗ್ ರೂಂ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ 2,400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಮತ ಎಣಿಕೆ ಕೇಂದ್ರಗಳಲ್ಲದೇ ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಸಹ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕಾರಿ/ಸಿಬ್ಬಂದಿ, ಕೆ.ಎಸ್.ಆರ್.ಪಿ ಹಾಗೂ ಸಿ.ಎ.ಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ತುಮಕೂರು: ಸ್ಥಳೀಯ V/S ವಲಸಿಗ ಹಣಾಹಣಿಯಲ್ಲಿ ಗೆಲ್ಲೋರ್‍ಯಾರು?, ಸೋಲೋರ್‍ಯಾರು? - Tumakuru Lok Sabha Constituency