ಕರ್ನಾಟಕ

karnataka

ETV Bharat / state

ಹೆಚ್ಚು ಆಸ್ತಿ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ - BBMP

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ವಸೂಲಿ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (ETV Bharat)

By ETV Bharat Karnataka Team

Published : Nov 11, 2024, 10:58 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ವಸೂಲಿ ಮಾಡಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸೋಮವಾರ ಮಲ್ಲೇಶ್ವರಂ ಐಪಿಪಿ ಸಭಾಂಗಣ ಕೊಠಡಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕು. ಆಯಾ ವಲಯಗಳ ಸಹಾಯಕ ಕಂದಾಯ ಅಧಿಕಾರಿ ವ್ಯಾಪ್ತಿವಾರು ಸಭೆ ನಡೆಸಿ, ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಾಗೂ ಪರಿಷ್ಕರಣೆ ಪ್ರಕರಣಗಳ ಪಟ್ಟಿಯ ಅನುಸಾರ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (ETV Bharat)

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದ್ದು, ಈ ಯೋಜನೆ 30ನೇ ನವೆಂಬರ್ ವರೆಗೆ ಮಾತ್ರ ಜಾರಿಯಲ್ಲಿರಲಿದೆ. ಈ ಸಂಬಂಧ ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು 30ನೇ ನವೆಂಬರ್ ಒಳಗಾಗಿ BBMPtax.karnataka.gov.in ಗೆ ಭೇಟಿ ನೀಡಿ ಪಾವತಿಸಬೇಕು. ಇಲ್ಲವಾದಲ್ಲಿ 1ನೇ ಡಿಸೆಂಬರ್ 2024 ರಿಂದ ಪಾವತಿಸಬೇಕಿರುವ ಬಾಕಿ ಆಸ್ತಿ ತೆರಿಗೆಯು ದುಪ್ಪಟ್ಟಾಗಲಿದೆ ಎಂಬುದರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ದಾಖಲೆಗಳನ್ನು ತೆಗದುಕೊಂಡು ಹೋಗಿ 45 ರೂ. ಪಾವತಿಸಿದರೆ ಇ-ಖಾತಾ ಸಿಗಲಿದೆ ಎಂದು ಮಾಹಿತಿ ನೀಡಿದರು.

ನಾಗರಿಕರು ಇ-ಖಾತಾ ಪಡೆಯಲು ಅರ್ಜಿ ಹಾಕುವ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಸಲುವಾಗಿ ಪಾಲಿಕೆಯ ಯುಟ್ಯೂಬ್ ಲಿಂಕ್ https://youtube.com/@bbmpcares?si=YStwr7xLhX5aRxFT ನಲ್ಲಿ ಕನ್ನಡ ಹಾಗೂ ಇಂಗ್ಲಿಷ್​ ಎರಡೂ ಭಾಷೆಯ ವಿಡಿಯೋ ಅಪ್ಲೊಡ್ ಮಾಡಲಾಗಿದೆ. ಈ ವಿಡಿಯೋ ನೋಡಿಕೊಂಡು ಸುಲಭವಾಗಿ ಇ-ಖಾತಾ ಪಡೆಯಬಹುದಾಗಿದೆ. ಇದೇ ರೀತಿ ಇನ್ನಿತರ ವಿಡಿಯೋಗಳು ಕೂಡ ಕೂಡಾ ಅಪ್ಲೋಡ್ ಅಗಲಿದ್ದು, ಪಾಲಿಕೆಯ ಯೂಟ್ಯೂಬ್ ಚಾನಲ್ ಅನ್ನು ಅನುಸರಿಸಬೇಕು ಎಂದು ಕೋರಿದರು.

ಇ-ಖಾತಾ ಪಡೆಯಲು ತಾಂತ್ರಿಕ ಸಮಸ್ಯೆಯಿದ್ದರೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ವಲಯವಾರು 13 ಸಹಾಯ ತಂಡಗಳನ್ನು ರಚಿಸಲಾಗಿದೆ. ಈ ಕೇಂದ್ರಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.

ಇಂದು ನಡೆದ ಸಭೆಯಲ್ಲಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರುಗಳಾದ ವಿನೋತ್ ಪ್ರಿಯಾ, ಸತೀಶ್, ಸ್ನೇಹಲ್, ಕರೀಗೌಡ, ಅರ್ಚನಾ, ರಮೇಶ್, ಗಿರೀಶ್, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಲಯ ಸಹಾಯವಾಣಿ ಸಂಖ್ಯೆ
ಬೊಮ್ಮನಹಳ್ಳಿ 9480683182 / 9480683712
ದಾಸರಹಾಳ್ಳಿ 9480683710
ಮಹಾದೇವಪುರ 9480683718 / 9480683720
ಪೂರ್ವ 9480683203
ಪಶ್ಚಿಮ 9480683653 / 9480683204
ದಕ್ಷಿಣ 9480683638 / 9480683179
ರಾಜರಾಜೇಶ್ವರಿ ನಗರ 9480683576
ಯಲಹಂಕ ವಲಯ 9480683645 / 9480683516

ಇದನ್ನೂ ಓದಿ:ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿಗೆ ಟಿಡಿಆರ್ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್​ನಲ್ಲಿ ವಜಾ

ABOUT THE AUTHOR

...view details