ತುಮಕೂರು:ಚಿಕ್ಕನಾಯಕನಹಳ್ಳಿ ತಾಲೂಕಿನ ದಲಿತ ಮಹಿಳೆಯ ಜಾತಿ ನಿಂದನೆ ಹಾಗೂ ಕೊಲೆ ಪ್ರಕರಣದಲ್ಲಿ 21 ಮಂದಿ ಆರೋಪಿಗಳಿಗೆ ತುಮಕೂರು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ರಂಗನಾಥ್ ಜಿ.ಎಸ್., ಮಂಜುಳ ರಂಗನಾಥ, ರಾಜು, ಶ್ರೀನಿವಾಸ, ಸ್ವಾಮಿ, ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ, ಸತ್ಯಪ್ಪ, ನಂಜುಂಡಯ್ಯ, ಚಂದ್ರಶೇಖರ್, ರಂಗಣ್ಣ, ಉಮೇಶ, ಬುಳ್ಳೆ ಹನುಮಂತಯ್ಯ, ಚನ್ನಮ್ಮ, ಜಯಣ್ಣ, ಕೆ.ಜಿ.ಮಂಜು ಹಾಗೂ ಸ್ವಾಮಿ ಎಂಬವರೇ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದವರು.
ಚಿಕ್ಕನಾಯಕನಹಳ್ಳಿ ದಲಿತ ಮಹಿಳೆ ಕೊಲೆ ಪ್ರಕರಣ: 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ (ETV Bharat) ಪ್ರಕರಣದ ಹಿನ್ನೆಲೆ:2010ರ ಜೂನ್ 28ರಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಮಹಿಳೆ ಹೊನ್ನಮ್ಮ ಎಂಬವರನ್ನು ಕೊಲೆ ಮಾಡಲಾಗಿತ್ತು. ಮರದ ತುಂಡುಗಳ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಕೊಲೆ ನಡೆದಿತ್ತು.
ತಮ್ಮ ಮನೆ ಬಳಿ ಇದ್ದ ಮರದ ತುಂಡುಗಳನ್ನು ಕದ್ದೊಯ್ದಿರುವ ಬಗ್ಗೆ ಹೊನ್ನಮ್ಮ ಹಂದನಕೆರೆ ಪೊಲೀಸ್ ಠಾಣಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಆರೋಪಿಗಳು ಗುಂಪು ಕಟ್ಟಿಕೊಂಡು ಬಂದು, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಲ್ಲದೆ, ಕಲ್ಲು ಎತ್ತಿಹಾಕಿ ಹೊನ್ನಮ್ಮಳನ್ನು ಹತ್ಯೆ ಮಾಡಿದ್ದರು ಎಂದು ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಎಸ್.ಸಿ/ಎಸ್.ಟಿ ಆಕ್ಟ್ -1989 ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಹಂದನಕೆರೆ ಪೊಲೀಸ್ ಠಾಣೆಯ ಅಂದಿನ ಎಎಸ್ಐ ಗಂಗಾಧರಯ್ಯ ಪ್ರಕರಣ ದಾಖಲು ಮಾಡಿದ್ದರು. ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವರುದ್ರಸ್ವಾಮಿ ತನಿಖೆ ಕೈಗೊಂಡು ಒಟ್ಟು 27 ಆರೋಪಿತರ ವಿರುದ್ಧ ತುಮಕೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನಾಗೀರೆಡ್ಡಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 21 ಮಂದಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕಿ ಬಿ.ಎಸ್.ಜ್ಯೋತಿ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ:ಶಾಸಕ ಎಸ್.ಆರ್.ವಿಶ್ವನಾಥ್ಗೆ ಕೊಲೆ ಬೆದರಿಕೆ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ