ಬೆಂಗಳೂರು: "ತಮಿಳುನಾಡು ಏನಾದರೂ ಮಾಡಿಕೊಳ್ಳಲಿ. ನಾನು ಮೇಕೆದಾಟು ಕಟ್ಟಲೆಂದೇ ಜಲ ಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, "ಅವರ ಹೋರಾಟ ಅವರು ಮಾಡಲಿ. ಕಾವೇರಿ ನೀರು ನಿರ್ವಹಣಾ ಸಮಿತಿಗೆ ನೀರಿನ ಸಮಸ್ಯೆಯ ಅರಿವಿದೆ. ಅವರು ನಮಗೆ ನ್ಯಾಯ ಕೊಡಲೇಬೇಕು. ಕೋರ್ಟ್ನಲ್ಲೂ ನಮಗೆ ನ್ಯಾಯ ಸಿಗುತ್ತದೆ. ಅದು ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲ. ಅದು ಅವರ ಪಕ್ಷದ ಪ್ರಣಾಳಿಕೆಯಾಗಿದೆ. ಅದು ಅವರ ರಾಜಕೀಯ ಬಯಕೆ ಅಷ್ಟೇ" ಎಂದು ಹೇಳಿದರು.
"ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಎರಡೂ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಇಡೀ ದೇಶದ ಜನರು ಕರ್ನಾಟಕದಲ್ಲಿ ಇದ್ದಾರೆ. ಈ ಯೋಜನೆಯಿಂದ ಇಡೀ ದೇಶದ ಜನರಿಗೆ ಉಪಯೋಗವಾಗುತ್ತದೆ. ನಮ್ಮ ಸಹೋದರರು ಬೆಂಗಳೂರಿನಲ್ಲೂ ಇದ್ದಾರೆ. ಅವರಿಗೂ ಒಳ್ಳೆಯದು ಆಗಲಿ ಎಂದು ಮೇಕೆದಾಟು ಯೋಜನೆಯ ಪರವಾಗಿ ತಮಿಳುನಾಡು ಮಾತನಾಡುವ ಒಳ್ಳೆಯ ಕಾಲ ಬರಲಿದೆ" ಎಂದರು.
ಇಂದು ಸಂಜೆ ಅಂತಿಮ ಪಟ್ಟಿ:"ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ತಮಿಳುನಾಡು, ಉತ್ತರಪ್ರದೇಶ ರಾಜ್ಯಗಳ ಪಟ್ಟಿ ಅಂತಿಮಗೊಳ್ಳುತ್ತಿದೆ. ಗುರುವಾರ ಸಂಜೆ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಇಂದು ಸಂಜೆಯೇ ಎಲ್ಲ ಅಭ್ಯರ್ಥಿಗಳು ಮತ್ತು ಮಂತ್ರಿಗಳ ಜೊತೆ ಸಭೆ ಇಟ್ಟುಕೊಂಡಿದ್ದೇವೆ" ಎಂದರು.
ನಾಲ್ಕು ಕ್ಷೇತ್ರಗಳಲ್ಲಿ ಗೊಂದಲ ಉಂಟಾಗಿದೆ ಎನ್ನುವ ಪ್ರಶ್ನೆಗೆ "ನಾಲ್ಕು ಕ್ಷೇತ್ರಗಳ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಜೂಮ್ ಮೂಲಕ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.