ಬೆಂಗಳೂರು: "ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದೇ ಬರ ಪರಿಹಾರ ಬಿಡುಗಡೆ ಘೋಷಣೆ ಮಾಡಲಿ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದು, ಈ ವೇಳೆ ಬರ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಇಲ್ಲೇ ಘೋಷಣೆ ಮಾಡಲು ಮನವಿ ಮಾಡುತ್ತೇನೆ. ವಿಪಕ್ಷದವರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಅಮಿತ್ ಶಾರನ್ನು ಭೇಟಿಯಾಗಿ ಇಂದೇ ಪರಿಹಾರ ಹಣ ಬಿಡುಗಡೆ ಘೋಷಣೆ ಮಾಡುವಂತೆ ಒತ್ತಾಯಿಸಬೇಕು" ಎಂದು ಸವಾಲು ಹಾಕಿದರು.
"ವಿಪಕ್ಷದವರು ಭೇಟಿಗೆ ಪ್ರಯತ್ನವನ್ನೇ ಮಾಡಿಲ್ಲ ಅಂದರೆ ಅವರದ್ದು ನಾಟಕ ಎಂದು ಗೊತ್ತಾಗುತ್ತೆ. ಅವರು ಟೈಂ ಕೊಡುತ್ತಾರೆ ಎಂದುಕೊಂಡಿದ್ದೇನೆ. ಇವರಿಗೆ ಅಮಿತ್ ಶಾ ಟೈಂ ಕೇಳುವ ಧೈರ್ಯ ಇದೆಯಾ ಎಂಬ ಬಗ್ಗೆ ಮಾತನಾಡಲ್ಲ. ಅಮಿತ್ ಶಾ ಅವರು ಇಂದೇ ಪರಿಹಾರ ಹಣ ಬಿಡುಗಡೆ ಘೋಷಣೆ ಮಾಡಬೇಕು. ಹಾಗೆ ಮಾಡಿದರೆ ನಾನು ಅವರನ್ನು ಅಭಿನಂದಿಸುತ್ತೇನೆ. ಬೇರೆ ರಾಜ್ಯಗಳು ಮನವಿ ಕೊಡುವ ಎರಡು ತಿಂಗಳ ಮುಂಚೆನೇ ನಾವು ಕೇಂದ್ರಕ್ಕೆ ಪರಿಹಾರ ಕೋರಿ ಮೆಮೊರೆಂಡಂ ಕೊಟ್ಟಿದ್ದೇವೆ. ಬರ ಪರಿಹಾರ ವಿಳಂಬ ವಿಚಾರವಾಗಿ ನಾನು ರಾಜಕೀಯ ಬೆರೆಸಲು ಹೋಗಲ್ಲ" ಎಂದರು.
"223 ತಾಲೂಕುಗಳಲ್ಲಿ ಬರ ತಾಂಡವಾಡುತ್ತಿದೆ. ಬರ ನಿರ್ವಹಣೆಗೆ ₹ 870 ಕೋಟಿಯನ್ನು ರಾಜ್ಯ ಸರ್ಕಾರ ಡಿಸಿ, ತಹಶೀಲ್ದಾರ್ ಖಾತೆಗೆ ನೀಡಿದೆ. ಕುಡಿಯುವ ನೀರು, ಮೇವು ನಿರ್ವಹಣೆಗೆ ಜವಾಬ್ದಾರಿ ನೀಡಿದ್ದೇವೆ. ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. 431 ಟಾಸ್ಕ್ ಫೋರ್ಸ್ ಸಭೆಗಳು ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿವೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ 236 ಸಭೆಗಳು ನಡೆದಿವೆ. 183 ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು 156 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 46 ಗ್ರಾಮಗಳಲ್ಲಿ 60 ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ" ಎಂದು ತಿಳಿಸಿದರು.
33 ಲಕ್ಷ ರೈತರಿಗೆ ಪರಿಹಾರ ಹಣ ಜಮೆ: "ರೈತರ ಸಮಸ್ಯೆಗೆ ಸ್ಪಂದಿಸಿ ಗರಿಷ್ಠ 2000 ರೂ. ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 33 ಲಕ್ಷ ರೈತರಿಗೆ 628 ಕೋಟಿ ಹಣವನ್ನು ನೇರವಾಗಿ ಜಮೆ ಮಾಡಲಾಗಿದೆ. 1.60 ಲಕ್ಷ ರೈತರ ಖಾತೆಗೆ ಹಣ ಜಮೆಯಾಗುವ ಹಂತದಲ್ಲಿದೆ. ಕಳೆದ ಬಾರಿ ಪರಿಹಾರ ಹಣದ ದುರುಪಯೋಗ ಆಗಿತ್ತು. ಲೂಟಿ ಮಾಡುತ್ತಿದ್ದರೂ ಅಧಿಕಾರಿಗಳ ವಿರುದ್ಧ ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅನರ್ಹರಿಗೂ ನೆರೆ ಪರಿಹಾರ ಹಣ ನೀಡಲಾಗಿತ್ತು. ನಾವು ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ರೈತರಿಗೆ ಬಿಕ್ಷೆ ಕೊಟ್ಟಂತೆ ಆಗಬಾರದು ಎಂದು ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡುತ್ತಿದ್ದೇವೆ. ಪ್ರತಿ ಗ್ರಾಮ ಪಂ. ವ್ಯಾಪ್ತಿಯಲ್ಲಿ ಯಾರ ಖಾತೆಗಳಿಗೆ ಎಷ್ಟು ಹಣ ಹೋಗಿದೆ ಎಂಬ ವಿವರ ಪ್ರಕಟಿಸಲು ಸೂಚನೆ ನೀಡಲಾಗಿದೆ. ಯಾವುದಾದರು ರೈತ ಬಿಟ್ಟು ಹೋಗಿದ್ದರೆ ಕೃಷಿ ಇಲಾಖೆ, ಕಂದಾಯ ಇಲಾಖೆಯನ್ನು ಸಂಪರ್ಕಿಸಲಿ" ಎಂದು ಮನವಿ ಮಾಡಿದರು.
ಇದನ್ನೂ ಓದಿ:ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸುವುದಾಗಿ ಘೋಷಿಸಲಿ: ಸಿಎಂ ಸವಾಲು