ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲೇ ವರುಣನ ಕಣ್ಣಾ ಮುಚ್ಚಾಲೆ: ಮಳೆ ಹೆಚ್ಚು- ಕಡಿಮೆಯಾಗಲು ಹವಾಮಾನ ವೈಪರೀತ್ಯ ಕಾರಣವೇ..? - Reason for Decrease in Rainfall - REASON FOR DECREASE IN RAINFALL

ಮಳೆ ಹಳಿ ತಪ್ಪಿರುವುದಕ್ಕೆ, ಹವಾಮಾನ ವೈಪರೀತ್ಯಕ್ಕೆ ನಾವೇ ಕಾರಣವಾಗಿದ್ದೇವೆ, ಇದು ಸ್ವಯಂಕೃತ ಅಪರಾಧವಾಗಿದೆ. ಅದರ ಶಿಕ್ಷೆಯನ್ನು ನಾವೇ ಅನುಭವಿಸಬೇಕಾಗಿದೆ ಎಂದು ಪರಿಸರಪ್ರೇಮಿ ನಿವೃತ್ತ ಉಪನ್ಯಾಸಕ ಬಿ.ಎಂ. ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Environmentalist B.M. Kumaraswamy
ಪರಿಸರಪ್ರೇಮಿ ಬಿ.ಎಂ. ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Jun 26, 2024, 10:53 AM IST

Updated : Jun 26, 2024, 11:14 AM IST

ಪರಿಸರಪ್ರೇಮಿ ಬಿ.ಎಂ. ಕುಮಾರಸ್ವಾಮಿ (ETV Bharat)

ಶಿವಮೊಗ್ಗ: ಮಲೆನಾಡನ್ನು ಮಳೆನಾಡು ಎಂದು ಸಹ ಕರೆಯಲಾಗುತ್ತದೆ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಸದಾ ಮಳೆಯದ್ದೇ ಸದ್ದು. ಮಳೆ ಬಂದರೆ, ಬೇಗ ಬಿಡುವುದಿಲ್ಲ ಎಂಬ ಮಾತು ಇತ್ತು‌. ಆದರೆ ಈಗ ಮಳೆ ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದೇ ತಿಳಿಯದಾಗಿದೆ. ಈಗ ಮಳೆ ಒಂದು ಪ್ರದೇಶದಲ್ಲಿ ಬರುತ್ತಿದ್ದರೆ, ಇನ್ನೂಂದು ಪ್ರದೇಶದಲ್ಲಿ ಬಾರದು. ಮಳೆಯ ಅಭಾವ, ವಿಪರೀತ ಮಳೆಯೇ ಬಾರದೇ ಇರುವುದಕ್ಕೆ ಹವಮಾನ ವೈಪರೀತ್ಯವೇ ಕಾರಣ ಎಂದು ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಪರಿಸರದ ವಿರುದ್ಧದ ಕೆಲಸದಿಂದ ನಾವು ಇಂದು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಲು ಕಾರಣಿಕರ್ತರಾಗಿದ್ದೇವೆ. ಮಲೆನಾಡಿನಂತಹ ಮಳೆನಾಡಿನಲ್ಲಿ ಮಳೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವಿಪರೀತ ಮಳೆ ಬಂದು ಅನಾಹುತಕ್ಕೆ ಕಾರಣವಾಗುತ್ತಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಭಾರಿ ಜೂನ್ ಮುಗಿಯುತ್ತಾ ಬಂದರು ಸಹ ವಾಡಿಕೆ ಮಳೆಯಾಗಿಲ್ಲ. ಅಲ್ಲದೇ ಕೆರೆ ಕಟ್ಟೆಗಳು, ಜಲಾಶಯಕ್ಕೆ ನಿಗದಿತ ಪ್ರಮಾಣದಲ್ಲಿ ಒಳಹರಿವು ಬರುತ್ತಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ಮಳೆಯೇ ಆಗಿಲ್ಲ. ಮಳೆಯು ಜುಲೈ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ಬರುತ್ತಿದೆ. ಈ ಬಾರಿ ಮಳೆ ಜೂನ್​ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಂದು ಮಳೆಯ ಬಗ್ಗೆ ಭರವಸೆಯನ್ನು ಮೂಡಿಸಿದೆ. ಜೂನ್​ನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆ 472 ಎಂಎಂ ಮಳೆಯಾಗಬೇಕು. ಆದರೆ ಇದುವರೆಗೂ ಆಗಿದ್ದು ಕೇವಲ 166 ಎಂ.ಎಂ. ಮಾತ್ರ. ಇದೇ ರೀತಿ ವಾಡಿಕೆ ಮಳೆ ಒಮ್ಮೊಮ್ಮೆ ಹೆಚ್ಚಾದರೆ, ಮತ್ತೊಮ್ಮೆ ಕಡಿಮೆ ಆಗುತ್ತಿದೆ. ಇದಕ್ಕೆ ಇಂದಿನ ಕೈಗಾರಿಕಾ ಕ್ರಾಂತಿ, ಇಂಧನ ಬಳಕೆ ಹೆಚ್ಚಳ ಹಾಗೂ ಅರಣ್ಯನಾಶ ಕಾರಣ ಎಂದು ಪರಿಸರಪ್ರೇಮಿ ನಿವೃತ್ತ ಉಪನ್ಯಾಸಕ ಬಿ.ಎಂ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

"ನಮ್ಮ ಭಾರತ ಕೃಷಿ ಮತ್ತು ಪಶುಪಾಲನೆ ಪ್ರಧಾನ ದೇಶ. ನಮ್ಮಲ್ಲಿ ಇರುವ ಅನೇಕ ಕೈಗಾರಿಕೆಗಳು ಕೃಷಿ ಆಧಾರಿತ ಕೈಗಾರಿಕೆಗಳೇ ಆಗಿವೆ. ನಮ್ಮ ಜನಜೀವನ, ಹಬ್ಬ ಹರಿದಿನ ಎಲ್ಲವೂ ಕೃಷಿ ಪ್ರಧಾನವಾಗಿವೆ. ಕೃಷಿಗೆ ಕಾಲಕಾಲಕ್ಕೆ ಮಳೆ ಬರುವಂತಹದ್ದು ಅತ್ಯಂತ ಅವಶ್ಯಕ. ಮಳೆ ಸಕಾಲಕ್ಕೆ ಬಾರದೇ ಇದ್ದರೂ, ಮಳೆ ಹೆಚ್ಚು ಬಂದರೂ ಮಳೆ ಕೈ ಕೊಟ್ಟಿತು ಅಂತಲೇ ಹೇಳುತ್ತೇವೆ. ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ಮಳೆ ತಾಳವೇ ತಪ್ಪಿದೆ. ಕೃಷಿಕರು ಯಾವ ಮಳೆ ಯಾವಾಗ ಬರುತ್ತದೆ. ಬೆಳೆ ಯಾವಾಗ ಹಾಕಬೇಕು, ಕಳೆ ಯಾವಾಗ ತೆಗೆಯಬೇಕು ಎಂದು ತಿಳಿದುಕೊಂಡಿದ್ದರು‌."

"ಹಿಂದೆಲ್ಲಾ ಸಮಯಕ್ಕೆ ಸರಿಯಾಗಿ ಮಳೆ ಬರುತ್ತಿತ್ತು. ಮಳೆಗಾಲಕ್ಕೆ ಒಂದು ಲಯ ತಾಳವಿತ್ತು. ಆದರೆ, ಈಗ ಮಳೆ ಯಾವಾಗ ಬರುತ್ತದೆ ಯಾವಾಗ ಹೋಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಲಯ ತಪ್ಪಿ ಹೋಗಿದೆ. ಇದರಿಂದ ಯಾವಾಗ ಬಿತ್ತಬೇಕು, ಯಾವಾಗ ಕಟಾವು ಮಾಡಬೇಕು ಎಂದು ತಿಳಿಯದ ಅಯೋಮಯ ಸ್ಥಿತಿಗೆ ಬಂದು ಬಿಟ್ಟಿದ್ದೇವೆ. ಹವಾಮಾನ ಇಲಾಖೆ ವರದಿಯಂತೆ 2023 ಜೂನ್​ನಲ್ಲಿ ಶೇ.9ರಷ್ಟು ಮಳೆ ಕೊರತೆ ಇತ್ತು. ಜುಲೈನಲ್ಲಿ ಶೇ.13ರಷ್ಟು ಅಧಿಕ ಮಳೆಯಾಗಿದೆ. ಆಗಸ್ಟ್​ನಲ್ಲಿ ಶೇ.36ರಷ್ಟು ಮಳೆ ಕೊರತೆ. ಸೆಪ್ಟೆಂಬರ್​​ನಲ್ಲಿ ಶೇ.13 ರಷ್ಟು‌ ಮಳೆ ಅಧಿಕವಾಗಿ ಬಂದಿತ್ತು. ಹೀಗೆ ಮಳೆ ಏರುಪೇರು ಆಗುತ್ತಿದೆ. ಇದರಿಂದ ಆತನಿಗೆ ತಾನು ಏನು ಬಿತ್ತನೆ ಮಾಡಬೇಕು ಎಂಬುದು ತಿಳಿಯದಂತೆ ಆಗಿದೆ." ಎಂದರು.

"ಕೊಯ್ಲಿಗೆ ಬಂದ ಬೆಳೆಯನ್ನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಬಂದು, ಎಲ್ಲವನ್ನೂ ಹಾಳು ಮಾಡಿ, ರೈತನ ಬೆಳೆ ಜೊತೆಗೆ ಸಾಲವೂ ಮಣ್ಣುಪಾಲಾಗುತ್ತದೆ. ಈಗ ಭಾರತದಲ್ಲಿ ಅಯೋಮಯ ವಾತವಾರಣ ಉಂಟಾಗಿದೆ. ಕೃಷಿ ಬೆಳೆಗಳಿಗೆ ಹೊಸ ಹೊಸ ರೋಗಗಳು ಬರುತ್ತಿವೆ. ಕೃಷಿ ಉತ್ಪಾದನೆ ಕಡಿಮೆಯಾದ ಕಾರಣ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಈಗ ಭಾರತ ವಿಷಮ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ನೂರಾರು ವರ್ಷಗಳಿಂದ ಹದವಾಗಿ ಬರುತ್ತಿದ್ದ ಮಳೆ ಈಗ ಬದಲಾಗಿದೆ. ಈಗ ಮಳೆ ಬಂದರೆ ಎಲ್ಲಾ ಕೊಚ್ಚಿಕೊಂಡು ಹೋಗುವ ಸ್ಥಿತಿ. ಇಲ್ಲವಾದಲ್ಲಿ ಏನೂ ಇಲ್ಲ ಎಂಬಂತೆ ಆಗಿದೆ." ಎಂದು ತಿಳಿಸಿದರು.

ಇದು ಪರಿಸರದ ತಪ್ಪಲ್ಲ, ನಮ್ಮ ಸ್ವಯಂಕೃತ ಅಪರಾಧ:"ಇದು ಪರಿಸರದ ತಪ್ಪಲ್ಲ, ಇದು ನಾವೇ ಮಾಡಿಕೊಂಡಿರುವುದು. ಇದು ಸ್ವಯಂಕೃತ ಅಪರಾಧ. ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗೆ ಹವಾಮಾನ ವೈಪರೀತ್ಯ ಎಂದು ಕರೆಯುತ್ತಾರೆ. ನಾವು ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ‌. ಆರ್ಥಿಕ ಅಭಿವೃದ್ಧಿಗೆ ನಮಗೆ ಶಕ್ತಿ ಬೇಕು. ವಿದ್ಯುತ್ ಶಕ್ತಿ ಈಗ ಕೃಷಿಯಲ್ಲೂ ಬೇಕಾಗಿದೆ. ವಿದ್ಯುತ್ ಉತ್ಪಾದನೆಗೆ ನಾವು ಕಲ್ಲಿದ್ದಲು ಬಳಸುತ್ತಿದ್ದೇವೆ. ಕಲ್ಲಿದ್ದಲನ್ನು ದೊಡ್ಡ ಪ್ರಮಾಣದಲ್ಲಿ ಉರಿಸಿದಾಗ ಅದರಿಂದ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಆಗುತ್ತದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿರುವ ಇದು ವಾತಾವರಣಕ್ಕೆ ಸೇರಿ, ಸೂರ್ಯನಿಂದ ಬರುವ ಬೆಳಕು ಭೂಮಿಯಿಂದ ವಾಪಸ್ ಹೋಗುವುದಕ್ಕೆ ಇದು ಬಿಡುವುದಿಲ್ಲ." ಎಂದರು.

"ಕಲ್ಲಿದ್ದಲಿನ ಜೊತೆಗೆ ಪೆಟ್ರೋಲಿಯಂ ಅನ್ನು ಸಹ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದ್ದೇವೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಆಗುತ್ತದೆ. ಇಂದು ನಮ್ಮ ಎಲ್ಲ ಅಭಿವೃದ್ಧಿಯೂ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಮೇಲೆಯೇ ನಿಂತಿದೆ. ಇದನ್ನೇ ನಾವು ಅಭಿವೃದ್ಧಿ ಎಂದು ಕರೆಯುತ್ತೇವೆ‌. ಇದೇ ನಮ್ಮ ಇಂದಿನ ಹವಾಮಾನ ವೈಪರಿತ್ಯ‌ಕ್ಕೆ ಕಾರಣವಾಗಿದೆ." ಎಂದು ಹೇಳಿದರು.

ಇಂಧನ ಬಳಕೆ ಕಡಿಮೆ ಮಾಡಬೇಕಾದ ಅಗತ್ಯವಿದೆ:"2030ರ ಹೊತ್ತಿಗೆ ನಾವು 2010ರಲ್ಲಿ ನಾವು ಬಳಸುತ್ತಿದ್ದ ಇಂಧನದ ಶೇ.50ರಷ್ಟಕ್ಕೆ ಇಳಿಸಬೇಕು. ಇಲ್ಲವಾದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳು ಹೇಳುತ್ತಾರೆ. ಭೂಮಿ ಮೇಲಿನ ತಾಪಮಾನ ಹೆಚ್ಚಾಗುತ್ತಿದೆ. ಭೂಮಿಯ ತಾಪಮಾನ ಹೆಚ್ಚಾಗುತ್ತಿರುವುದರಿಂದ ಭೂಮಿಯ ವಾತಾವರಣ ಕೆಟ್ಟು ಹೋಗುತ್ತಿದೆ. ಆದರೆ, ಇಷ್ಟಾದರೂ ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ಅರಣ್ಯ ಕಡಿದು ಹಾಕುವುದು. ಹೊಸ ಹೊಸ ಘಟನಕಗಳ ಮೂಲಕ ವಿದ್ಯುತ್ ಉತ್ಪಾದನೆ ಪ್ರಮಾಣ ಜಾಸ್ತಿ ಮಾಡುತ್ತಿದ್ದೇವೆ.‌ ನಾವು ವಿನಾಶಕಾರಿ ಅಭಿವೃದ್ಧಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಮುಂದೆ ಇರುವ ಅಪಾಯವನ್ನು ನಾವು ನೋಡುತ್ತಿಲ್ಲ. ಇದೇ ಹವಮಾನ ವೈಪರೀತ್ಯವಾಗಿದೆ." ಎಂದರು.

"ಇದು ಎಲ್ಲೋ ಇಂಗ್ಲೆಂಡ್​ನಲ್ಲಿ ಅಲ್ಲ, ನಮ್ಮ ಮನೆ ಬಾಗಿಲಲ್ಲೇ ಬಂದು ನಿಂತಿದೆ. ಬೆಂಗಳೂರಿನಲ್ಲಿ ಮೇ ಕೊನೆಯ ತನಕ ಕುಡಿಯುವ ನೀರಿಗೆ ತೀವ್ರ ಬರಗಾಲ ಉಂಟಾಗಿತ್ತು. ಆದರೆ ಜೂನ್ 4ರಂದು 133 ವರ್ಷಗಳಲ್ಲಿ ಬರದಂತಹ ಮಳೆ ಬಂದಿತ್ತು. ಒಂದೇ ವಾರದಲ್ಲಿ ಇಂತಹ ವ್ಯತ್ಯಾಸವಾದರೆ, ಇದನ್ನು ಯಾರೂ ತಡೆದುಕೊಳ್ಳಲು ಸಾಧ್ಯವಿಲ್ಲ. ವಿಜ್ಞಾನಿಗಳು ಹೇಳುವ ಪ್ರಕಾರ 2030 ರ ಹೂತ್ತಿಗೆ ಭೂಮಿಯ ಸರಾಸರಿ ತಾಪಮಾನ 1.5 ಡಿಗ್ರಿ ಹೆಚ್ಚಾಗಲಿದೆ. 1900ರ ಕೈಗಾರಿಕ ಕ್ರಾಂತಿಗೂ ಮೊದಲು ಇದ್ದ ಉಷ್ಣಾಂಶಕ್ಕಿಂತ ಈಗ 1.1 ಡಿಗ್ರಿ ಉಷ್ಣಾಂಶ ಜಾಸ್ತಿಯಾಗಿದೆ ಅಷ್ಟೇ. ಅದಕ್ಕೆ ಇಷ್ಟೊಂದು ಅನಾಹುತ ನೋಡುತ್ತಿದ್ದೇವೆ. ಇನ್ನು 2030ರ ವೇಳೆಗೆ 1.5 ಡಿಗ್ರಿ ಉಷ್ಣಾಂಶ ಹೆಚ್ಚಾದರೆ, ಆಗಿನ ಪರಿಸ್ಥಿತಿ ಯಾವ ರೀತಿಯದ್ದಾಗಿರಬಹುದು." ಎಂದು ಆತಂಕ ವ್ಯಕ್ತಪಡಿಸಿದರು.

ಉಷ್ಣಾಂಶ ಏರಿಕೆ, ಹೊಸ ಹೊಸ ರೋಗಗಳ ಆಗಮನ:"ಉಷ್ಣಾಂಶ ಏರಿಕೆಯಿಂದ ಹವಮಾನ ವೈಪರೀತ್ಯ, ಚಂಡಮಾರುತ, ಬರಗಾಲ ಇನ್ನೂ ಹೆಚ್ಚಾಗಿ ಹೊಸಹೊಸ ರೋಗಗಳು ಬರಲು ಪ್ರಾರಂಭಿಸಿವೆ. ಇದರಿಂದ ನಮ್ಮ ಬದುಕು ಇನ್ನೂ ದುರ್ಬರವಾಗುತ್ತಾ ಹೋಗುತ್ತದೆ. ಹಾಗಾಗಿ ನಾವು ಆದಷ್ಟು ಬೇಗ ಅಲ್ಲ, ಈಗಲೇ ಎಚ್ಚರಗೊಳ್ಳಬೇಕು. ಪರಿಸರಕ್ಕೆ ಪೂರಕವಾಗಿ ನಾವು ಅರಣ್ಯವನ್ನು ಬೆಳೆಸಬೇಕು. ಕೆರೆಗಳನ್ನು ನಿರ್ಮಾಣ ಮಾಡಬೇಕು. ಬಿದ್ದ ಮಳೆಯನ್ನು ಸಂಗ್ರಹ ಮಾಡಬೇಕು.‌ ನಾವು ನಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು.‌ ಸರ್ಕಾರದ ನೀತಿಯನ್ನು ಬದಲಾವಣೆ ಮಾಡಬೇಕು. ನಾವು ಪೆಟ್ರೋಲ್, ಡಿಸೇಲ್ ಹಾಗೂ ಕಲ್ಲಿದ್ದಲು ಬಳಸುವುದನ್ನು ಕಡಿಮೆ ಮಾಡಬೇಕು. ಅರಣ್ಯ ಬೆಳೆಸಬೇಕು. ಕಸ್ತೂರಿ ರಂಗನ್ ವರದಿಯನ್ನು ಎಲ್ಲರೂ ಬೇಡ ಬೇಡ ಎಂದರು. ಕೊನೆಗೆ ಸರ್ಕಾರವೂ ಬೇಡವೆಂದಿತು" ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪಾರಂಪರಿಕ ಕಪ್ಪತಗುಡ್ಡದ ಸುತ್ತಲು 1 ಕಿಮೀ ಗಣಿಗಾರಿಕೆ ನಿಷೇಧಿಸಿದ್ದ ಕ್ರಮ ಎತ್ತಿಹಿಡಿದ ಹೈಕೋರ್ಟ್ - High court upholds ban

Last Updated : Jun 26, 2024, 11:14 AM IST

ABOUT THE AUTHOR

...view details