ಕರ್ನಾಟಕ

karnataka

ETV Bharat / state

ಶಾಸಕ ಮುನಿರತ್ನ ಅವರದ್ದೇ ಆಡಿಯೋ ಎಂದು ಖಚಿತವಾದರೆ ಕಾನೂನು ಕ್ರಮ: ಸಚಿವ ಜಿ. ಪರಮೇಶ್ವರ್ - G Parameshwara - G PARAMESHWARA

ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಮುನಿರತ್ನ ಅವರು ಆಡಿಯೋವನ್ನು ಎಫ್​ಎಸ್​ಎಲ್​ ನವರು ಪರೀಕ್ಷಿಸಿ, ಆಡಿಯೋ ಅವರದ್ದಾ ಅಲ್ಲವೋ ಎಂಬುದನ್ನು ದೃಢಪಡಿಸುತ್ತಾರೆ. ಅವರದ್ದೇ ಆಡಿಯೋ ಎಂದು ಖಚಿತವಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಜಿ. ಪರಮೇಶ್ವರ್​ ತಿಳಿಸಿದರು.

ಸಚಿವ ಜಿ. ಪರಮೇಶ್ವರ್
ಸಚಿವ ಜಿ. ಪರಮೇಶ್ವರ್ (ETV Bharat)

By ETV Bharat Karnataka Team

Published : Sep 15, 2024, 3:27 PM IST

Updated : Sep 15, 2024, 3:39 PM IST

ಸಚಿವ ಜಿ. ಪರಮೇಶ್ವರ್ (ETV Bharat)

ತುಮಕೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ದೂರಿನ ಮೇರೆಗೆ ಶಾಸಕ ಮುನಿರತ್ನ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸಲಾಗಿದೆ. ಈ ಪ್ರಕರಣ ಸಂಬಂಧ ತನಿಖೆ‌ ಆರಂಭಿಸಲಾಗಿದೆ. ಎರಡು ದಿನದ ಅವಧಿಗೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಆ ರೀತಿ ಹೇಳಿಲ್ಲ, ನನಗೆ ಸಂಬಂಧಿಸಿದ ಆಡಿಯೋ ಅಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಎಫ್​ಎಸ್​ಎಲ್​ ನವರು ಆಡಿಯೋ ಅವರದ್ದಾ ಅಥವಾ ಅಲ್ಲವಾ ಎಂದು ಪರೀಕ್ಷಿಸಿ ದೃಢಪಡಿಸುತ್ತಾರೆ. ಅವರದ್ದೇ ಆಡಿಯೋ ಎಂದು ಖಚಿತವಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ತನಿಖೆಯ ವರದಿ ಬರುವವರೆಗೂ ನಾನು ಏನನ್ನೂ ಹೇಳುವುದಿಲ್ಲ. ಆಕಸ್ಮಿಕ ಎಂಬ ಪದ ಬಳಸಿದ್ದಕ್ಕೆ ವಿಪಕ್ಷದವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಗಲಭೆ ಪೂರ್ವನಿಯೋಜಿತವೇ ಎಂಬುದು ವರದಿ ಬಂದ ನಂತರ ಗೊತ್ತಾಗಲಿದೆ. ಗಣೇಶಮೂರ್ತಿ ಮೆರವಣಿಗೆಯ ಮಾರ್ಗ ಏಕೆ ಬದಲಿಸಿದರು ಎಂಬ ಸತ್ಯಾಂಶವೂ ತನಿಖೆಯಿಂದ ಬಯಲಾಗಲಿದೆ. ಈಗಾಗಲೇ ಇನ್ಸ್​ಪೆಕ್ಟರ್​, ಡಿವೈಎಸ್‌ಪಿಯನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಯಾ ಠಾಣಾ ವ್ಯಾಪ್ತಿಯಲ್ಲಿ ಏನೇ ಘಟನೆ ನಡೆದರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದೇನೆ. ಕೆಎಸ್‌ಆರ್‌ಪಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ಈದ್ ಮಿಲಾದ್ ಸಂದರ್ಭದಲ್ಲಿಯೂ ಸಹ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ‌ ಎಂದು ಸಚಿವರು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಬೆಳಕಿಗೆ ಬಂದ‌ ಕೂಡಲೇ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರ ರಾಜೀನಾಮೆ‌ ಪಡೆದರು. ಅದರ ಜೊತೆಗೆ ಆಯೋಗ ರಚಿಸಿ ತನಿಖೆ ಮಾಡಲು ಆದೇಶಿಸಿದರು. ಎಸ್‌ಐಟಿ ರಚಿಸಿ ಸೂಕ್ತ ತನಿಖೆಗೆ ಸೂಚಿಸಿದರು. ಬ್ಯಾಂಕಿಗೆ ಸಂಬಂಧಪಟ್ಟ ವಿಚಾರಗಳಿವೆ ಎಂದು ಕೇಂದ್ರ ಸರ್ಕಾರವು ಇಡಿ, ಸಿಬಿಐ ತನಿಖೆಗೆ ಸೂಚಿಸಿದೆ. ತಪ್ಪುಗಳನ್ನು ಮುಚ್ಚಿಡದೇ ಕ್ರಮ ವಹಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದರು.

ಮುಲಾಜಿಲ್ಲದೆ‌ ಕ್ರಮ:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಅಲ್ಲಲ್ಲಿ ಆದ ಘಟನೆಗಳನ್ನು ನಿಯಂತ್ರಿಸಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಕೋಮುಗಲಭೆ, ರಾಜಕೀಯ ಗಲಾಟೆಗಳು ಈಗ ನಡೆದಿಲ್ಲ‌ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ರಾಜ್ಯದ ಶಾಂತಿಯನ್ನು ಹಾಳು ಮಾಡಲು ಪ್ರಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ‌ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಪರಮೇಶ್ವರ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ತಪ್ಪು ಯಾರೇ ಮಾಡಿದರೂ ತಪ್ಪೇ: ಮುನಿರತ್ನ ಪ್ರಕರಣದ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ - DK Suresh

Last Updated : Sep 15, 2024, 3:39 PM IST

ABOUT THE AUTHOR

...view details