ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಸುಪ್ರೀಂ ಕೋರ್ಟ್ಗೆ ಪದೋನ್ನತಿ ಪಡೆದ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ಕನ್ನಡಿಗರೇ ಆದ ಪಿ.ಎಸ್. ದಿನೇಶ್ ಕುಮಾರ್ ಅವರಿಗೆ ಬೆಂಗಳೂರು ವಕೀಲರ ಸಂಘ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿತು. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಇಬ್ಬರೂ ನ್ಯಾಯಮೂರ್ತಿಗಳನ್ನು ವಕೀಲರ ಸಮೂಹದಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಈವರೆಗಿನ ನನ್ನ ಜೀವನದಲ್ಲಿ ಗಳಿಸಿರುವ ಸಾಧನೆಯಿದ್ದರೆ ಅದು ಡಾ. ಬಿ.ಆರ್.ಅಂಬೇಡ್ಕರ್ ಅವರಿಂದಲೇ ಸಿಕ್ಕಿರುವುದಾಗಿದೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ 1 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಸ್ವತಃ ಅಂಬೇಡ್ಕರ್ ಅವರು ವಕೀಲರಾಗಿ ವಾದ ಮಂಡಿಸಿದ್ದ ನೆನಪಿಗಾಗಿ ಚಿಕ್ಕೋಡಿ ನ್ಯಾಯಾಲಯಲ್ಲಿ ಶಿಲಾನ್ಯಾಸ ನೆರವೇರಿಸಿದ್ದು, ನನ್ನ ಇಡೀ ಜೀವನದಲ್ಲಿ ಮರೆಯಲಾದ ಸಂದರ್ಭವಾಗಿದೆ ಎಂದರು.
ತಮ್ಮ ಕುಟುಂಬ ಈ ಹಿಂದೆ ಎದುರಿಸಿದ್ದ ಸಂಕಷ್ಟಗಳು, ತಂದೆಯನ್ನು ಕಳೆದುಕೊಂಡ ಸಂದರ್ಭಗಳನ್ನು ನೆನೆಯುತ್ತಾ ಗದ್ಗದಿತರಾದರು. ಇಂದು ನಡೆಯುತ್ತಿರುವ ಕಾರ್ಯಕ್ರಮ ನಮ್ಮ ಕುಟುಂಬದ ಸದಸ್ಯರಿಂದ ಬೀಳ್ಕೊಡುಗೆ ಸ್ವೀಕರಿಸಿದಂತಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮಾತನಾಡಿ, ಯುವ ವಕೀಲರು ಯಾವುದೇ ಪ್ರಕರಣ ತಮ್ಮಲ್ಲಿ ಬಂದ ಬಳಿಕ ಅದರ ವಾಸ್ತವಾಂಶಗಳನ್ನು ತಿಳಿದುಕೊಳ್ಳಬೇಕು. ಆ ಅಂಶಗಳನ್ನು ಆಧರಿಸಿ ನ್ಯಾಯಮೂರ್ತಿಗಳಿಗೆ ನೇರವಾಗಿ ತಿಳಿಸುವಂತಾಗಬೇಕು. ಇವುಗಳನ್ನು ಅನುಸರಿಸಿದಲ್ಲಿ ವೃತ್ತಿಯಲ್ಲಿ ಬೆಳೆಯಲು ಮತ್ತು ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಿಸಿದಂತಾಗಲಿದೆ ಎಂದು ಸಲಹೆ ನೀಡಿದರು.