ಬೆಂಗಳೂರು: ದೇಶದ ಕಾನೂನು ಒಬ್ಬ ವ್ಯಕ್ತಿಯನ್ನು ಇಂತಹ ರಾಜ್ಯಕ್ಕೆ ಮಾತ್ರ ಸೀಮಿತ ಎಂಬುದಾಗಿ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಕರ್ನಾಟಕದ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ (ನರ್ಸಿಂಗ್) ಅಧ್ಯಯನ ಮಾಡಿದ್ದ ಇಬ್ಬರು ವಿದ್ಯಾರ್ಥಿನಿಯರು ಕೇರಳ ದಾದಿಯರು ಮತ್ತು ಶುಶ್ರೂಷಕಿಯರ ಮಂಡಳಿ(ಕೆಎನ್‌ಎಂಸಿ)ಯಲ್ಲಿ ನೋಂದಣಿ ಮಾಡಿಕೊಳ್ಳಲು ನಿರ್ದೇಶಿಸಿದೆ.
ಮಂಗಳೂರಿನ ನ್ಯೂ ಆರ್.ಕೆ.ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ 2023ರಲ್ಲಿ ಬಿಎಸ್ಸಿ (ನರ್ಸಿಂಗ್) ಪಡೆದ ದಾನಿಯಾ ಜಾಯ್ ಮತ್ತು ನೀತು ಬೇಬಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅಲ್ಲದೆ, ಮತ್ತೊಂದು ರಾಜ್ಯದಲ್ಲಿ ಬಿಎಸ್ಸಿ (ನರ್ಸಿಂಗ್) ಕೋರ್ಸ್‌ನಲ್ಲಿ ಪದವಿ ಪಡೆದವರು ಆ ರಾಜ್ಯದ ಕಾಲೇಜಿನಲ್ಲಿ ಪದವಿ ಪಡೆದಿಲ್ಲ ಎಂಬ ಕಾರಣ ನೀಡಿ ರಾಜ್ಯ ನರ್ಸಿಂಗ್ ಕೌನ್ಸಿಲ್ ನೋಂದಣಿ ನಿರಾಕರಿಸುವಂತಿಲ್ಲ ಎಂದು ಕೆಎನ್‌ಎಂಸಿಗೆ ಆದೇಶಿಸಿದೆ. ಜೊತೆಗೆ, ಇಂತಹದ್ದೇ ರಾಜ್ಯದಲ್ಲಿ ನರ್ಸಿಂಗ್ ವೃತ್ತಿಯನ್ನು ಅಭ್ಯಾಸ ಮಾಡುವ ಸಲುವಾಗಿ ನೋಂದಣಿಗಾಗಿ ಭಾರತೀಯ ನರ್ಸಿಂಗ್ ಕೌನ್ಸಿಲ್(ಐಎನ್‌ಸಿ) ಮಾನ್ಯತೆ ಪ್ರಮಾಣ ಪತ್ರ ಒದಗಿಸುವ ಅಗತ್ಯವನ್ನು ರಾಜ್ಯ ನರ್ಸಿಂಗ್ ಕೌನ್ಸಿಲ್ ಒತ್ತಾಯಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ನರ್ಸಿಂಗ್ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ಕಾಲೇಜು ತನ್ನ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಐಎನ್‌ಸಿಯಿಂದ ನೋಂದಣಿಯನ್ನು ಪಡೆಯಲು ಕಾಯ್ದೆಯಲ್ಲಿ ಯಾವುದೇ ಅಗತ್ಯವಿಲ್ಲ. ಐಎನ್‌ಸಿಯಲ್ಲಿ ನೋಂದಣಿಯ ಅಗತ್ಯವಿಲ್ಲ ಅಥವಾ ನೋಂದಣಿಗಾಗಿ ಐಎನ್‌ಸಿ ಕಾಯಿದೆಯಲ್ಲಿ ಯಾವುದೇ ಕಾರ್ಯವಿಧಾನ ಒದಗಿಸಲಾಗಿಲ್ಲ. ಐಎನ್‌ಸಿಯಿಂದ ಅಂತಹ ನೋಂದಣಿ ಪ್ರಮಾಣ ಪತ್ರವನ್ನು ಹಾಜರುಪಡಿಸುವಂತೆ ಕೆಎನ್‌ಎಂಸಿ ಅರ್ಜಿದಾರರನ್ನು ಒತ್ತಾಯಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದೆ.
ಅಲ್ಲದೆ, ನರ್ಸಿಂಗ್ ವೃತ್ತಿ ಮೂಲಭೂತ ಹಕ್ಕಾಗಿದ್ದು, ಸಂವಿಧಾನದ ಪರಿಚ್ಚೇದ 19(1)(ಜಿ)ಅಡಿಯಲ್ಲಿ ಬರಲಿದೆ. ನರ್ಸಿಂಗ್ ಕೌನ್ಸಿಲ್ ಕಾಯಿದೆ 1957ರ ಪ್ರಕಾರ ರಾಜ್ಯ ಪ್ರಾಧಿಕಾರದಿದ ನರ್ಸಿಂಗ್ ಪದವಿ ಇಲ್ಲವೇ ಡಿಪ್ಲೊಮಾ ಪಡೆದ ಬಳಿಕ ಆಯಾ ರಾಜ್ಯದಲ್ಲಿ ಮಾತ್ರ ಅಭ್ಯಾಸ ಮಾಡಬೇಕು ಎಂಬ ನಿರ್ಬಂಧವಿಲ್ಲ ಎಂದು ನರ್ಸಿಂಗ್ ಕಾಲೇಜುಗಳ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಪ್ರಕರಣದಲ್ಲಿ ಕೇರಳ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ನರ್ಸಿಂಗ್ ಮುಗಿಸಿ ತಮ್ಮ ತವರು ರಾಜ್ಯದಲ್ಲಿ ಉದ್ಯೋಗಕ್ಕಾಗಿ ಮುಂದಾಗಿದ್ದಾರೆ. ಆದರೆ, ಅವರು ವಿದ್ಯಾಭ್ಯಾಸ ಮಾಡಿದ ಕಾಲೇಜು ಐಎನ್‌ಸಿಯಲ್ಲಿ ನೋಂದಣಿಯಾಗಿಲ್ಲ ಎಂಬ ಕಾರಣ ನೀಡಿ ಅವರನ್ನು ದಾದಿಯರನ್ನಾಗಿ ನೋಂದಾಯಿಸಲು ನಿರಾಕರಿಸಲಾಗಿದೆ. ತನ್ನ ರಾಜ್ಯದಲ್ಲಿ ಜನಿಸಿದರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಪೀಠ ಹೇಳಿದೆ.