ಕರ್ನಾಟಕ

karnataka

ETV Bharat / state

ಏಕಕಾಲಕ್ಕೆ ಕೆಎಸ್​ಡಿಎಲ್​ನ 21 ಹೊಸ ಉತ್ಪನ್ನ ಬಿಡುಗಡೆ: ಗುಣಮಟ್ಟ ಕಾಪಾಡಿಕೊಳ್ಳಲು ಸಿಎಂ ಸಲಹೆ

ಇಂದು ಕರ್ನಾಟಕ ಮತ್ತು ಮಾರ್ಜಕ ನಿಯಮಿತದ 21 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.

ಕೆಎಸ್​ಡಿಎಲ್​ನ 21ಹೊಸ ಉತ್ಪನ್ನಗಳ ಬಿಡುಗಡೆ
ಕೆಎಸ್​ಡಿಎಲ್​ನ 21ಹೊಸ ಉತ್ಪನ್ನಗಳ ಬಿಡುಗಡೆ

By ETV Bharat Karnataka Team

Published : Jan 20, 2024, 8:25 PM IST

ಬೆಂಗಳೂರು: ವಸ್ತುವಿನ ಗುಣಮಟ್ಟ ಹೆಚ್ಚಿಸುವ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಎಸ್​ಡಿಎಲ್ (KSDL) ಉತ್ಪಾದನೆಯಲ್ಲಿ ತೊಡಗಿ ಲಾಭದಾಯಕವಾಗಿ ಪ್ರಗತಿ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ ಕರ್ನಾಟಕ ಮತ್ತು ಮಾರ್ಜಕ ನಿಯಮಿತದ 21ನೂತನ ವೈವಿದ್ಯಮಯ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ಮಾಡುವಂತಹ ಗುಣಮಟ್ಟವನ್ನು ನಾವು ಕಾಪಾಡಿಕೊಳ್ಳಬೇಕು.

ಕೆಎಸ್​ಡಿಎಲ್​ನ 21ಹೊಸ ಉತ್ಪನ್ನಗಳ ಬಿಡುಗಡೆ

ಇದರಲ್ಲಿ KSDL ಯಶಸ್ಸುಗಳಿಸಿದೆ. ಸಚಿವ ಎಂ.ಬಿ.ಪಾಟೀಲ್ ಅವರು KSDLನ ಘನತೆ ಹೆಚ್ಚಿಸಿ ಲಾಭದಾಯಕ ಪ್ರಗತಿ ಕಾಣಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 107 ವರ್ಷಗಳ ಇತಿಹಾಸ ಹೊಂದಿರುವ ಕೆಎಸ್​ಡಿಎಲ್​, ಒಂದೇ ಬಾರಿಗೆ 21 ಉತ್ಪನ್ನಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲ ಬಾರಿಯಾಗಿದೆ. ಸಂಸ್ಥೆಯು ಈಗಿನ ತಲೆಮಾರಿನ ಯುವಜನರ ನಿರೀಕ್ಷೆಗೆ ತಕ್ಕಂತೆ ಶವರ್ ಜೆಲ್ ಸೇರಿದಂತೆ ಬಗೆಬಗೆಯ ಉತ್ಪನ್ನಗಳನ್ನು ಉತ್ಪಾದಿಸಲು ಮುಂದಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇದರ ಜೊತೆಗೆ ಗುಣಮಟ್ಟಕ್ಕೆ ಆದ್ಯತೆ ಮುಂದುವರಿಯಬೇಕು ಎಂದರು.

ಹಿಂದಿನ ಸಾಲಿನಲ್ಲಿ ಸಂಸ್ಥೆಯು 132 ಕೋಟಿ ರೂ. ಲಾಭ ಮಾಡಿತ್ತು. ಎಂ ಬಿ ಪಾಟೀಲರು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮೇಲೆ, ಕಳೆದ ಎಂಟು ತಿಂಗಳಲ್ಲಿ ಲಾಭವು 182 ಕೋಟಿ ರೂ.ಗಳಿಗೇರಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಉತ್ಪಾದನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಅವರು ಹಲವು ಮಹತ್ವಾಕಾಂಕ್ಷಿ ಉಪಕ್ರಮಗಳನ್ನು ಕೈಗೊಂಡಿರುವುದು ಸ್ತುತ್ಯರ್ಹ ಸಂಗತಿಯಾಗಿದೆ ಎಂದು ಸಚಿವರ ಬೆನ್ನುತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೈದರಾಬಾದಿನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಮಾಡಿ, ಇಬ್ಬರನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾಗಿರುವ ಕೆಎಸ್​ಡಿಎಲ್​ ಉತ್ಪನ್ನಗಳು ನಕಲಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಸಚಿವರನ್ನು ಮುಖ್ಯಮಂತ್ರಿ ಶ್ಲಾಘಿಸಿದರು. ಸರ್ಕಾರಿ ಸಂಸ್ಥೆ ಮತ್ತು ಸರ್ಕಾರಿ ಕಾರ್ಖಾನೆ ಎಂದರೆ ಯಾರೂ ಮೂಗು ಮುರಿಯದಂತಹ ರೀತಿಯಲ್ಲಿ ಪ್ರಗತಿ ಕಾಣಿಸಿ ಮಾದರಿಯಾಗಿ KSDL ಬೆಳವಣಿಗೆ ಕಂಡಿರುವುದಕ್ಕೆ ಎಲ್ಲರಿಗೂ ಮುಖ್ಯಮಂತ್ರಿಗಳು ಅಭಿನಂದಿಸಿದರು. KSDL ಸಂಸ್ಥೆಯ ಉತ್ಪನ್ನಗಳನ್ನು ನಕಲು ಮಾಡುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಇದೇ ಸಂದರ್ಭದಲ್ಲಿ ಸಿಎಂ ಸೂಚಿಸಿದರು.

ಕೆಎಸ್​ಡಿಎಲ್​ನ 21ಹೊಸ ಉತ್ಪನ್ನಗಳ ಬಿಡುಗಡೆ

3000 ಕೋಟಿ ಗುರಿ:ಕೆಎಸ್ ಡಿಎಲ್ ಅಧ್ಯಕ್ಷರೂ ಆದ ಸಚಿವ ಎಂ ಬಿ ಪಾಟೀಲ್ ಮಾತನಾಡಿ, 'ಸಂಸ್ಥೆಯ ವಹಿವಾಟು ಸದ್ಯಕ್ಕೆ 1,400 ಕೋಟಿ ರೂ.ಗಳ ಆಚೀಚೆ ಇದೆ. ಇದನ್ನು ಎರಡು ವರ್ಷಗಳಲ್ಲಿ 3,000 ಕೋಟಿ ರೂ.ಗಳಾಗುವಂತೆ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ಪಾದನೆಯ ಪ್ರಮಾಣವು ಇತ್ತೀಚೆಗೆ ಶೇ.25ರಷ್ಟು ಹೆಚ್ಚಾಗಿದೆ ಎಂದರು. ಕಳೆದ ಎಂಟು ತಿಂಗಳಲ್ಲಿ ಸಂಶೋಧನೆ ನಡೆಸಿ, ದಾಖಲೆಯ ಕ್ಷಿಪ್ರ ಅವಧಿಯಲ್ಲಿ ಹೊಸ ಉತ್ಪನ್ನಗಳನ್ನು ಹೊರತರಲಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ತಾಂತ್ರಿಕ ಸಮಾಲೋಚಕ ರಜನೀಕಾಂತ್ ಅವರ ನೆರವು ನಿರ್ಣಾಯಕವಾಗಿದೆ. ಜೊತೆಗೆ, ಪಾರದರ್ಶಕ ಸಾಬೂನುಗಳು ಮತ್ತು ಸುಗಂಧ ಭರಿತ ಉತ್ಪನ್ನಗಳ ತಯಾರಿಕೆ ಕೂಡ ಸದ್ಯದಲ್ಲೇ ಆರಂಭವಾಗಲಿದೆ ಎಂದು ಅವರು ನುಡಿದರು.

ಸಂಸ್ಥೆಯ ಉತ್ಪನ್ನಗಳ ನಕಲನ್ನು ತಡೆಯಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಅಮೆರಿಕ, ಯೂರೋಪು ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೆಎಸ್ಡಿಎಲ್ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಅಂತಾರಾಷ್ಟ್ರೀಯ ವಹಿವಾಟನ್ನು ಸದ್ಯದ 19 ಕೋಟಿ ರೂ.ಗಳಿಂದ 25 ಕೋಟಿ ರೂ.ಗಳಿಗೆ ಈ ವರ್ಷವೇ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಜತೆಗೆ ಇಡಿ ಭಾರತದಲ್ಲಿ ಸಂಸ್ಥೆಯ ಮಾರುಕಟ್ಟೆ ಜಾಲವನ್ನು ಬೆಳೆಸಲಾಗುವುದು ಎಂದು ಅವರು ವಿವರಿಸಿದರು.

ಮೈಸೂರು ಸ್ಯಾಂಡಲ್ ವೇವ್ ಶ್ರೇಣಿಯ ಸಾಬೂನುಗಳು:ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ಕೆಎಸ್ಡಿಎಲ್ ಹೊರತಂದಿರುವ 'ಮೈಸೂರು ಸ್ಯಾಂಡಲ್ ವೇವ್' ಶ್ರೇಣಿಯ ಪ್ರೀಮಿಯಂ ಸಾಬೂನುಗಳು ಜಾಗತಿಕ ಗುಣಮಟ್ಟದಿಂದ ಕೂಡಿವೆ. ಈ ಶ್ರೇಣಿಯಲ್ಲಿ ವೆಜಿಟಬಲ್ ಆಯಿಲ್ ಮತ್ತು ಅರಿಶಿನವಿರುವ ವೇವ್ ಟರ್ಮರಿಕ್, ನಿಂಬೆಯ ಪರಿಮಳದ ವೇವ್ ಲೈಮ್, ಪುದೀನಾದ ಘಮ ಸೂಸುವ ವೇವ್ ಡಿಯೋ, ಕೇಸರಿ ಇರುವ ವೇವ್ ಮಿಲ್ಕ್ ಸ್ಯಾಫ್ರನ್, ಬಾದಾಮಿ ಎಣ್ಣೆಯ ಅಂಶವಿರುವ ವೇವ್ ಆಲ್ಮಂಡ್, ಶುದ್ಧ ಬೇವಿನೆಣ್ಣೆ, ತುಳಸಿ ಮತ್ತು ಅರಿಶಿಣ ಇರುವ ನೀಮ್ ಸೋಪ್, ಲೋಳೇಸರ ಮತ್ತು ಬಾದಾಮಿ ತೈಲದ ಅಂಶವಿರುವ ವೇವ್ ಅಲೋ ಸೋಪ್, ಮಲ್ಲಿಗೆಯ ಸುಗಂಧವಿರುವ ಜಾಸ್ಮೀನ್ ಕ್ರೀಮ್ ಸೋಪ್, ಔದ್ ಅರೇಬಿಯನ್ ಐಷಾರಾಮಿ ಸಾಬೂನು ಮತ್ತು ಸೀಗೇಕಾಯಿ, ಜಪಾಕುಸುಮ, ಭೃಂಗರಾಜ, ನೆಲ್ಲೀಕಾಯಿ ಹಾಗೂ ಬ್ರಾಹ್ಮೀ ಇರುವ ಮೈಸೂರು ಸ್ಯಾಂಡಲ್ ಶಿಕಾಕಾಯಿ ಸಾಬೂನುಗಳಿವೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಉತ್ಪನ್ನಗಳಲ್ಲಿ ಮೈಸೂರು ಸ್ಯಾಂಡಲ್ ವೇವ್ಸ್ ಶ್ರೇಣಿಯ 10 ಬಗೆಯ ಪ್ರೀಮಿಯಂ ಮೈಸೂರು ಸ್ಯಾಂಡಲ್ ಸಾಬೂನುಗಳು, 3 ಬಗೆಯ ಶವರ್ ಜೆಲ್, 6 ತರಹದ ಸೋಪ್ ಕಿಟ್, ಹ್ಯಾಂಡ್ ವಾಶ್ ಮತ್ತು ಕುಡಿಯುವ ನೀರು ಸೇರಿವೆ. ಕೆಎಸ್ ಡಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಬೋಯಿಂಗ್ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ - ಸಿಎಂ ಸಿದ್ದರಾಮಯ್ಯ ಸಾಥ್

ABOUT THE AUTHOR

...view details