ಶಿರಾಡಿಘಾಟ್ ರಸ್ತೆಯಲ್ಲಿ ಭೂ ಕುಸಿತ: ಮಣ್ಣಿನಡಿ ಸಿಲುಕಿದ ವಾಹನಗಳು (ETV Bharat) ಸಕಲೇಶಪುರ (ಹಾಸನ): ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ರಸ್ತೆಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಮಣ್ಣಿನಡಿ ಹಲವು ವಾಹನಗಳು ಸಿಲುಕಿವೆ.
ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಕಾರೊಂದರಲ್ಲಿ ಸವಾರರೂ ಇದ್ದು, ಅವರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ. ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣಿನಡಿ ಹೂತುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಳೆದ ವಾರವೂ ಸಕಲೇಶಪುರ ತಾಲೂಕಿನ ಇದೇ ದೊಡ್ಡತಪ್ಲು ಬಳಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ರಸ್ತೆಯನ್ನು ಬಂದ್ ಮಾಡಲಾಗಿತ್ತು.
ಮಂಗಳೂರು - ಬೆಂಗಳೂರು ಸಂಚಾರಕ್ಕೆ ಮತ್ತೆ ವಿಘ್ನ:ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಜರಿತ ಆಗಿರುವುದರಿಂದ ಮಂಗಳೂರು ಬೆಂಗಳೂರು ಸಂಚಾರಕ್ಕೆ ಮತ್ತೆ ವಿಘ್ನ ತಲೆದೋರಿದೆ. ಇತ್ತೀಚೆಗೆ ಶಿರಾಡಿ ಘಾಟಿಯಲ್ಲಿ ಗುಡ್ಡ ಜರಿತ ಆದ ಪರಿಣಾಮ ಮಂಗಳೂರು ಬೆಂಗಳೂರು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿ ಘಾಟ್ ರಸ್ತೆ ಪ್ರಮುಖ ರಸ್ತೆಯಾಗಿದೆ. ಇತ್ತೀಚೆಗೆ ಆದ ಗುಡ್ಡ ಜರಿತದಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಇದೀಗ ಮತ್ತೆ ಇದೇ ರಸ್ತೆಯಲ್ಲಿ ಹಾಸನ ಭಾಗದಲ್ಲಿ ಗುಡ್ಡ ಜರಿತವುಂಟಾಗಿದೆ. ಇದರಿಂದ ಮಂಗಳೂರು ಬೆಂಗಳೂರು ನಡುವೆ ರಸ್ತೆ ಸಂಚಾರಕ್ಕೆ ಅಡ್ಡಿ ಎದುರಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಶಿರಾಡಿ ಘಾಟ್ ಆಚೆ ಹಾಸನ ಜಿಲ್ಲೆಯ ರಸ್ತೆಯಲ್ಲಿ ಗುಡ್ಡ ಜರಿತ ಉಂಟಾಗಿದೆ. ಆದುದರಿಂದ ಈ ರಸ್ತೆಯಲ್ಲಿ ಮಂಗಳೂರಿನಿಂದ ಸಂಚಾರವನ್ನು ಮಾಡುವವರು ಮುಂದಿನ ಸೂಚನೆಯವರೆಗೆ ಸಂಚಾರ ಮಾಡದಂತೆ ಕೋರಲಾಗಿದೆ. ಸಂಪಾಜೆ ಮುಖಾಂತರ ಹೋಗುವ ದಾರಿಯಲ್ಲಿ ಒಂದು ಗುಡ್ಡ ಜರಿತ ಆಗಿದ್ದು, ಅದನ್ನು ಕೂಡಲೇ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿ ಘಾಟ್ ಪ್ರಮುಖ ರಸ್ತೆಯಾಗಿದೆ. ಉಳಿದಂತೆ ಚಾರ್ಮಾಡಿ ಘಾಟ್ ಮತ್ತು ಸಂಪಾಜೆ ಘಾಟಿಯಿಂದಲೂ ಬೆಂಗಳೂರಿಗೆ ಸಂಪರ್ಕ ಬೆಳೆಸಬಹುದಾಗಿದೆ. ಆದರೆ, ಈ ರಸ್ತೆಗಳು ಅಗಲ ಕಿರಿದಾಗಿರುವುದರಿಂದ ಹೆಚ್ಚಿನ ವಾಹನಗಳ ಓಡಾಟಕ್ಕೆ ಅನುಕೂಲವಾಗಿಲ್ಲ. ಶಿರಾಡಿ ರಸ್ತೆಯ ಬದಲಿಗೆ ಈ ರಸ್ತೆಗಳನ್ನು ಸಂಚಾರಕ್ಕೆ ಬಳಸಿದರೆ ಘಾಟಿಯಲ್ಲಿ ವಾಹನಗಳ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಪಶ್ಚಿಮ ಘಟ್ಟದಲ್ಲಿ ಭೂಕುಸಿತವಾಗಿರುವುದರಿಂದ ರೈಲ್ವೆ ಸಂಚಾರವು ಬಂದ್ ಆಗಿದೆ. ಪರಿಣಾಮ ಮಂಗಳೂರು ಬೆಂಗಳೂರು ನಡುವೆ ಸಂಪರ್ಕಕ್ಕೆ ಸಮಸ್ಯೆ ತಲೆದೋರಿದೆ
ಕಳಪೆ ಕಾಮಗಾರಿ ಆರೋಪ:ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ರಸ್ತೆಯನ್ನು ಕೂಡಲೇ ಬಂದ್ ಮಾಡದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾಹುತವಾದರೆ ಅದಕ್ಕೆ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ. ಇದು ಪ್ರಕೃತಿ ವಿಕೋಪವಲ್ಲ ಗುತ್ತಿಗೆದಾರನ ಮಹಾಲೋಪ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಾರದ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಕೈಗಾರಿಕಾ ಸಚಿವ ಹೆಚ್. ಡಿ ಕುಮಾರಸ್ವಾಮಿ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್ ರಾಜಣ್ಣ ಅವರುಗಳಿಗೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಕುರಿತು ದೂರು ನೀಡಿದ್ದರು.
ಜುಲೈ 15 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ಶಿರೂರು ಗುಡ್ಡ ಕುಸಿತ ಪ್ರಕರಣ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದು, ಲಾರಿ ಚಾಲಕ ಅರ್ಜುನನ್ನು ಜೀವಂತವಾಗಿ ಅಥವಾ ಶವವಾಗಿ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಹಾಗೆ ಹಾಸನ ಜಿಲ್ಲೆಯ ಸಕಲೇಶಪುರ ಗುಂಡ್ಯ ನಡುವಿನ ಶಿರಾಡಿ ಘಾಟ್ ನಡುವೆ ಈ ವರ್ಷದಲ್ಲಿ ನಾಲ್ಕನೇ ಬಾರಿ ಗುಡ್ಡ ಕುಸಿತವಾಗಿದೆ. ಇಂದು ಗುಡ್ಡ ಕುಸಿತದಿಂದಾಗಿ ಹಲವಾರು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಆದರೆ, ನಾಲ್ಕು ಬಾರಿ ಗುಡ್ಡ ಕುಸಿತವಾದರೂ ಯಾವ ಜೀವಕ್ಕೂ ಹಾನಿಯಾಗಿಲ್ಲ ಎಂಬುದು ಮಾತ್ರ ಕೊಂಚ ನೆಮ್ಮದಿ ವಿಚಾರ.
ಇದನ್ನೂ ಓದಿ :ಶಿರೂರು ಗುಡ್ಡ ಕುಸಿತ: ಗಂಗಾವಳಿ ನದಿಯಲ್ಲಿ 4 ಪಾಯಿಂಟ್ಗಳ ಗುರುತು, ಮುಂದುವರೆದ ಕಾರ್ಯಾಚರಣೆ - Shiruru Hill Collapse Operation