ಬೆಂಗಳೂರು:ಸರ್ಕಾರಿ ಜಮೀನಿನಲ್ಲಿ ಮರ, ಗಿಡಗಳನ್ನು ಬೆಳೆಸಲು ಸಾರ್ವಜನಿಕರಿಗೆ ಅವಕಾಶ ನೀಡಿದಲ್ಲಿ, ಜಮೀನನ್ನು ತಮಗೆ ಮಂಜೂರು ಮಾಡಿದಂತೆ ಎಂಬ ಅಭಿಪ್ರಾಯಕ್ಕೆ ಬರುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮರ ನೆಡುವುದಕ್ಕಾಗಿ 1951ರಲ್ಲಿ ನೀಡಿದ್ದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಪರಿಹಾರ ನೀಡದ ಸರ್ಕಾರದ ಕ್ರಮ ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ತುಮಕೂರು ತಾಲೂಕಿನ ಯಲದಡ್ಲು ಗ್ರಾಮದ ನಂಜುಂಡಪ್ಪ ಮತ್ತಿತರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿ, ಮೇಲ್ಮನವಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಜೊತೆಗೆ, ಮರಗಳನ್ನು ಬೆಳೆಸುವ ಹಕ್ಕನ್ನು ಮಾತ್ರ ನೀಡಿದಾಗ ಆ ಭೂಮಿಯಲ್ಲಿ ಮರಗಳನ್ನು ಮಾತ್ರ ಬೆಳೆಸಬಹುದಾಗಿದೆ. ಆದರೆ, ಜಮೀನು ಮಂಜೂರು ಮಾಡಿದಂತೆ ಎಂದು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭೂಮಿಯಲ್ಲಿ ಮರಗಳನ್ನು ಬೆಳೆಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದ್ದರಿಂದ ಭೂಮಿಯನ್ನು ಅರ್ಜಿದಾರರಿಗೆ ಮಂಜೂರು ಮಾಡಿಲ್ಲ ಎಂದು ಪೀಠ ತಿಳಿಸಿದೆ. ಅಲ್ಲದೆ, ಪ್ರಕರಣದಲ್ಲಿ ಭೂಮಿಯ ಹಕ್ಕು ಮೇಲ್ಮನವಿ ಪೂರ್ವಜರ ಪರವಾಗಿ ಹಕ್ಕು ಹೊಂದಿದ್ದರೂ, ಭೂಮಿಯ ಮಾಲೀಕತ್ವ ಸರ್ಕಾರದಲ್ಲಿಯೇ ಉಳಿದಿದೆ. ಸಂವಿಧಾನದ ಪರಿಚ್ಛೇದ 300(ಎ) ಅಡಿಯಲ್ಲಿ ಖಾತ್ರಿ ಪಡಿಸಿರುವ ಆಸ್ತಿಯ ಹಕ್ಕು ಹೊಂದಿದ್ದರೂ, ಸರ್ಕಾರ ಪರಿಹಾರ ನೀಡಿದ ಬಳಿಕ ಖಾಸಗಿ ಜಮೀನನ್ನು ಸಾರ್ವಜನಿಕ ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ. ಆದರೆ, ಸರ್ಕಾರಿ ಭೂಮಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಪೀಠ ತಿಳಿಸಿದೆ.