ಹಾವೇರಿ:ಸವಣೂರು ತಾಲೂಕಿನ ಕಾರಡಗಿಯ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಲಕ್ಷ ದೀಪೋತ್ಸವದ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಅಮಾವಾಸ್ಯೆಯ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವಸ್ಥಾನದ ಆವರಣದಲ್ಲಿ ಲಕ್ಷಾಂತರ ದೀಪ ಹಚ್ಚಿ ಸಂಭ್ರಮಿಸಿದರು.
ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಭಕ್ತರು ದೀಪ ಹಚ್ಚಿ ಕಾರ್ತಿಕೋತ್ಸವದ ಸಂಭ್ರಮ ಆಚರಿಸಿದರು. ಕಳೆದ ಎರಡು ವರ್ಷಗಳಿಂದ ಕಾರಡಗಿಯಲ್ಲಿ ಲಕ್ಷ ದೀಪೋತ್ಸವ ಆಚರಿಸಲಾಗುತ್ತಿದೆ. ಕಾರಡಗಿ ವೀರಭದ್ರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಭಕ್ತರು ಉತ್ತಮವಾಗಿ ಸ್ಪಂದಿಸಿದ್ದು, ಲಕ್ಷ ದೀಪೋತ್ಸವ ಯಶಸ್ವಿಯಾಗಿ ನಡೆಯಿತು.
ಭಕ್ತರು ಮನೆಯಿಂದ ಎಣ್ಣಿ ಬತ್ತಿಗಳನ್ನು ತಂದು ದೇವಸ್ಥಾನದ ಆವರಣದಲ್ಲಿ ದೀಪಗಳನ್ನು ಹಚ್ಚಿದರು. ಕೆಲವರು ಪಣತಿಗಳನ್ನು ತಂದು ಅದರಲ್ಲಿ ದೀಪ ಹಚ್ಚಿ ಸಂಭ್ರಮಿಸಿದರು. ಲಕ್ಷ ದೀಪೋತ್ಸವದ ನಿಮಿತ್ತ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಲ್ಲದೇ ವಿಶೇಷ ಪೂಜೆ ಸಲ್ಲಿಸಲಾಯಿತು.