ಕೊಪ್ಪಳ:ದಕ್ಷಿಣ ಭಾರತದ ಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರರ ಮಹಾರಥೋತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು. ಗವಿಮಠದ ಅಂಗಳದಲ್ಲಿ ಸಂಜೆ 6 ಗಂಟೆಗೆ ಭಕ್ತ ಸಾಗರದ ಮಧ್ಯೆ ವೈಭವದಿಂದ ರಥೋತ್ಸವ ನೆರವೇರಿತು.
ಪ್ರಸಿದ್ಧ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಗವಿಮಠದ ಆವರಣದಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಜೊತೆಗೆ ಜೈ ಗವಿಸಿದ್ದೇಶ ಎಂಬ ನಾಮಸ್ಮರಣೆ ಮುಗಿಲು ಮುಟ್ಟಿತು. ಮಹಾ ರಥೋತ್ಸವವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದ ಭಾವ ವ್ಯಕ್ತಪಡಿಸಿದರು.
ಮಹಾರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸ್ವಾಮೀಜಿ, ನೀವು ಜಾತ್ರೆ ನೋಡಲೇಬೇಕು ಎಂದಾದರೆ, ಅದು ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ನೋಡಬೇಕು. ಇಲ್ಲಿ ಎಲ್ಲಿ ನೋಡಿದರೂ ಗವಿಸಿದ್ದೇಶ್ವರನ ಭಕ್ತಸಾಗರವೇ ಕಾಣುತ್ತದೆ. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಜನರು ಆಕರ್ಷಿತರಾಗುತ್ತಾರೆ. ಜಾತ್ರೆಗೆ ಬಂದಿರುವ ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಪಲ್ಲಕ್ಕಿ ಹೊತ್ತ ಡಿಸಿಎಂ ಶಿವಕುಮಾರ್:ರಥೋತ್ಸವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಶಿವರಾಜ ತಂಗಡಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜನಾರ್ದನ ರೆಡ್ಡಿ, ಶರಣಗೌಡ ಕಂದಕೂರು ಸೇರಿದಂತೆ ಹಲವು ಗಣ್ಯರು ಸಹ ಪಾಲ್ಗೊಂಡಿದ್ದರು. ಶ್ರೀ ಗವಿಸಿದ್ದೇಶ್ವರ ಉತ್ಸವ ಮೂರ್ತಿ ಇದ್ದ ಪಲ್ಲಕ್ಕಿ ಹೊತ್ತು ಡಿಸಿಎಂ ಶಿವಕುಮಾರ್ ತಮ್ಮ ಭಕ್ತಿ ಅರ್ಪಿಸಿದರು. ಶ್ರೀಮಠದ ಆವರಣದಿಂದ ರಥದವರೆಗೂ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊತ್ತು ಅವರು ಸಾಗಿದರು.