ಕಾರವಾರ(ಉತ್ತರ ಕನ್ನಡ):ರಸ್ತೆ ಕಾಮಗಾರಿ ಸಲುವಾಗಿ ರಾಷ್ಟ್ರೀಯ ಹೆದ್ದಾರಿ 766-ಇ ಕುಮಟಾ-ಶಿರಸಿ ರಸ್ತೆ ಸಂಚಾರ ಬಂದ್ ಮಾಡಿ, ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ಕುಮಟಾ-ಸಿದ್ದಾಪುರ (ಬಡಾಳ ರಸ್ತೆ) ರಾಜ್ಯ ಹೆದ್ದಾರಿಯನ್ನು ಸೂಚಿಸಲಾಗಿದೆ. ಆದರೆ ಈ ಹೆದ್ದಾರಿಯು ಗುಂಡಿಗಳಿಂದ ಹದಗೆಟ್ಟಿದ್ದು, ಗಿಡಗಂಟಿಗಳು ರಸ್ತೆಗೆ ಆವರಿಸಿ, ಸಂಚಾರ ಅವ್ಯವಸ್ಥೆಯಾಗಿ ಮಾರ್ಪಟ್ಟಿದೆ.
ಕುಮಟಾ-ಶಿರಸಿ ರಸ್ತೆಯನ್ನು ಸುಮಾರು ಎರಡು ತಿಂಗಳು ಬಂದ್ ಮಾಡುವುದಾಗಿ ಜಿಲ್ಲಾಡಳಿತ ಆದೇಶ ಮಾಡಿದೆ. ಆದರೆ, ಆ ರಸ್ತೆಗೆ ಪರ್ಯಾಯವಾಗಿ ಸೂಚಿಸಿರುವ ಯಾವ ರಸ್ತೆಯೂ ಸುಸ್ಥಿತಿಯಲ್ಲಿ ಇಲ್ಲ. ಅವು ಸಹ ಗುಂಡಿ ಬಿದ್ದು ಹಾಳಾಗಿವೆ. ಪರ್ಯಾಯ ಮಾರ್ಗಗಳನ್ನು ಸರಿಯಾಗಿ ಸಜ್ಜುಗೊಳಿಸದೇ ವಾಹನಗಳ ಸಂಚಾರ ಮಾರ್ಗ ಬದಲಿಸಲು ಮುಂದಾಗಿರುವುದು ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ಇಕ್ಕಟ್ಟಿನ ಸ್ಥಿತಿ ತಂದಿರಿಸಿದೆ.
ಕಾಮಗಾರಿಗಾಗಿ ಕುಮಟಾ-ಶಿರಸಿ ರೋಡ್ ಬಂದ್ (ETV Bharat) ಅಂಕೋಲಾ-ಯಲ್ಲಾಪುರ ಮತ್ತು ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಗಳು ಉತ್ತರ ಕರ್ನಾಟಕ ಮತ್ತು ಕರಾವಳಿಯ ವ್ಯಾಪಾರ ವಹಿವಾಟು ಬೆಸೆಯುವ ಅತ್ಯಂತ ಪ್ರಮುಖ ದಾರಿಗಳಾಗಿವೆ. ಈ ಹೆದ್ದಾರಿಗಳಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಶಿರಸಿ-ಕುಮಟಾ ಹೆದ್ದಾರಿಯನ್ನು ಗುತ್ತಿಗೆ ಪಡೆದಿರುವ ಆರ್‌ಎನ್‌ಎಸ್ ಕಂಪನಿಯು ದೇವಿಮನೆ ಘಟ್ಟ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಬಾಕಿ ಇರುವುದರಿಂದ ಕಾಮಗಾರಿಗೆ ಎರಡು ತಿಂಗಳು ಕಾಲಾವಕಾಶ ಕೋರಿ ವಾಹನ ಸಂಚಾರ ಬಂದ್ ಮಾಡುವಂತೆ ಕೋರಿತ್ತು.
ಅದರಂತೆ, ಡಿ.2ರಿಂದ 2025ರ ಫೆ.25ರವರಗೆ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಆದೇಶ ಮಾಡಿದ್ದಾರೆ. ಅದರಲ್ಲಿ ಜಿಲ್ಲಾಡಳಿತ ಸೂಚಿಸಿರುವ ಪರ್ಯಾಯ ಮಾರ್ಗಗಳು ಕೂಡ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಎಲ್ಲೆಡೆ ಗುಂಡಿಗಳ ರಾಶಿ ಬಿದ್ದು ವಾಹನಗಳು ಸಂಚರಿಸುವುದು ದುಸ್ತರವಾಗಿದೆ. ಅದರಲ್ಲೂ, ಅಂಕೋಲಾ-ಯಲ್ಲಾಪುರ ರಸ್ತೆಯಂತೂ ಭೀಕರ ಅಪಘಾತಗಳಿಂದ ಪದೇ ಪದೆ ಸುದ್ದಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಸ್ತೆಯಲ್ಲಿ ಗಿಡಗಂಟಿ ಆವರಿಸಿರುವುದು (ETV Bharat) ಲಘು ವಾಹನಗಳಿಗೆ ಅವಕಾಶ ಕೊಟ್ಟಿರುವ ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿ ಕೂಡ ಗುಂಡಿಗಳಿಂದ ತುಂಬಿದೆ. ಮೊದಲೇ ಈ ರಸ್ತೆ ತೀರಾ ಕಿರಿದಾಗಿದೆ. ಅದರ ನಡುವೆ ರಸ್ತೆ ಅಕ್ಕ-ಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿಕೊಂಡಿವೆ. ಇದರಿಂದ ಎದುರಿನಿಂದ ಬರುವ ವಾಹನಗಳೇ ಕಾಣದಷ್ಟು ಸಮಸ್ಯೆ ಉದ್ಭವಿಸಿದೆ. ತಿರುವಿನಲ್ಲಿ ಅಂತೂ ಎದುರು ಬರುವ ವಾಹನ ಕಾಣಿಸದಷ್ಟು ಸಮಸ್ಯೆ ಇದೆ. ದೊಡ್ಮನೆ ಘಟ್ಟ ಪ್ರದೇಶದಲ್ಲಿ ಮಳೆಗಾಲದಲ್ಲಿ ಕುಸಿದು ಬಿದ್ದ ಮಣ್ಣು ಹೆದ್ದಾರಿಯಿಂದ ಇನ್ನೂ ಪೂರ್ತಿಯಾಗಿ ತೆಗೆದಿಲ್ಲ. ಚರಂಡಿಗಳು ಮುಚ್ಚಿ ಮಳೆನೀರು ರಸ್ತೆ ಮೇಲೆಯೇ ಹರಿದ ಕಾರಣ ಹಲವೆಡೆ ಕೊರಕಲು ಬಿದ್ದು ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರು.
ಕುಮಟಾ-ಸಿದ್ದಾಪುರ ರಸ್ತೆ ದುರಸ್ತಿಗೆ ಆಗ್ರಹ:ಅಲ್ಲದೆ, ಕುಮಟಾ-ಸಿದ್ದಾಪುರ ರಸ್ತೆಯು ಮಳೆಗಾಲದಲ್ಲಿ ಪದೇ ಪದೆ ಗುಡ್ಡ ಕುಸಿತದ ಸಮಸ್ಯೆಗೆ ಒಳಗಾಗಿದೆ. ಕುಸಿತ ಸಾಧ್ಯತೆ ಇರುವ ಸ್ಥಳಗಲ್ಲಿ ತಡೆಗೋಡ ನಿರ್ಮಿಸುವುದು ಬಾಕಿ ಇದೆ. ಈವರೆಗೂ ಯಾವುದೇ ತಡೆಗೋಡೆ ನಿರ್ಮಾಣಕ್ಕೆ ಮುಂದಾಗದ ಕಾರಣ ಕಾಂಕ್ರೀಟ್ ರಸ್ತೆಯ ತಳದವರೆಗೂ ಮಣ್ಣು ಕುಸಿತವಾಗುತ್ತಿದೆ. ದುರಸ್ತಿ ಮಾಡದೇ ಇದ್ದರೆ ಮುಂದೊಂದು ದಿನ ಹೆದ್ದಾರಿ ಸಂಚಾರವೇ ಬಂದ್ ಆಗುವ ಆತಂಕ ಇದೆ. ಹಾಗಾಗಿ, ಈ ರಸ್ತೆಯನ್ನೂ ದುರಸ್ತಿ ಕೆಲಸ ಮಾಡುವುದು ಯಾವಾಗ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಕಿತ್ತುಹೋಗಿರುವ ಕುಮಟಾ-ಸಿದ್ದಾಪುರ ರಸ್ತೆ (ETV Bharat) ರಸ್ತೆ ಕಿರಿದಾಗಿರುವ ಕಾರಣ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಇದೆ. ಬದಲಿ ಮಾರ್ಗವಾದ ಈ ರಸ್ತೆಯಲ್ಲಿ ವಾಹನಗಳನ್ನು ಬಿಡುವ ಮುನ್ನ ರಸ್ತೆ ದುರಸ್ಥಿಗೊಳಿಸಬೇಕು. ರಸ್ತೆ ಮುಚ್ಚಿಕೊಂಡಿರುವ ಕಾಡು ಜೀಡುಗಳನ್ನು ತೆರವು ಮಾಡಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಬೇಕು. ಇಲ್ಲವಾದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ತಿಮ್ಮಪ್ಪ ನಾಯ್ಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮಲೀನವಾದ ವೃಷಭಾವತಿ ನದಿ ಸ್ವಚ್ಛಗೊಳಿಸಲು ಮುಂದಾದ ಬೆಂಗಳೂರು ವಿವಿ