ಕರ್ನಾಟಕ

karnataka

ETV Bharat / state

'ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ': ಸಿಎಂ ವಜಾಗೆ ಹೆಚ್​ಡಿಕೆ ಆಗ್ರಹಿಸಿದ್ದೇಕೆ? - ಸಿದ್ದರಾಮಯ್ಯ

ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ
ಕುಮಾರಸ್ವಾಮಿ

By ETV Bharat Karnataka Team

Published : Jan 28, 2024, 7:37 PM IST

ಬೆಂಗಳೂರು : 'ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಆಚಾರಗೆಟ್ಟ ಮುಖ್ಯಮಂತ್ರಿ ಎನ್ನುವ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ಈ ಡೋಂಗಿ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅವರು ಅರ್ಹರಲ್ಲ. ಕೂಡಲೇ ತಾವೆಸಗಿರುವ ಅಪಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಥವಾ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕಿತ್ತೆಸೆಯಬೇಕು' ಎಂದು ಆಗ್ರಹಿಸಿದ್ದಾರೆ.

'ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ. ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊಟ್ಟ ಮೊದಲ ರಾಷ್ಟ್ರಪತಿಗಳು, ಅದರಲ್ಲಿಯೂ ಮಹಿಳೆ. ಶೋಷಿತರ ಜಾಗೃತಿ ಸಮಾವೇಶದಲ್ಲೇ ಅವರಿಗೆ ಮುಖ್ಯಮಂತ್ರಿ ಅಪಮಾನ ಎಸಗಿದ್ದಾರೆ. ವಕೀಲರಂತೆ, ಸ್ವಯಂಘೋಷಿತ ಸಂವಿಧಾನ ತಜ್ಞರಂತೆ. ನಾಚಿಕೆಯಾಗಬೇಕು ಇವರಿಗೆ. ಸಾರ್ವಜನಿಕ ವೇದಿಕೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಮುಖ್ಯಮಂತ್ರಿಯೊಬ್ಬರು ಸಂಬೋಧಿಸುವ ರೀತಿಯೇ ಇದು. ಸಿದ್ದರಾಮಯ್ಯನವರ ನಡವಳಿಕೆ ಕರ್ನಾಟಕಕ್ಕೆ ಅಂಟಿದ ಅಳಿಸಲಾಗದ ಕಳಂಕ. ಅವರ ಈ ಕೀಳುಮಾತು ದೇಶಕ್ಕೆ, ಸಂವಿಧಾನಕ್ಕೆ ಆಗಿರುವ ಘೋರ ಅಪಚಾರ' ಎಂದು ವಾಗ್ದಾಳಿ ನಡೆಸಿದ್ದಾರೆ.

'ನಿನ್ನೆಯ ದಿನ ಚಾಮರಾಜನಗರದಲ್ಲಿ ಇದೇ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ, ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕು: 'ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ, ವಕೀಲಿಕೆ ನಮ್ಮಪ್ಪನ ಮನೆ ಆಸ್ತಿ ಎಂದು ಜಾಗಟೆ ಹೊಡೆಯುವ ಸಿದ್ದರಾಮಯ್ಯನವರು ಮಾನ, ಮರ್ಯಾದೆ, ಮಹಿಳೆಯರ ಮೇಲೆ ಗೌರವ ಏನಾದರೂ ಇಟ್ಟುಕೊಂಡಿದ್ದರೆ, ಈ ಕ್ಷಣದಲ್ಲಿಯೇ ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕು' ಎಂದು ಎಕ್ಸ್​ ಖಾತೆ ಮೂಲಕ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಬಿಜೆಪಿ, ಆರ್​ಎಸ್​ಎಸ್​ನವರು ಧರ್ಮ, ದೇವರು, ಜಾತಿ ಹೆಸರಲ್ಲಿ ಸಮಾಜ ಛಿದ್ರ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details