ಬೆಂಗಳೂರು/ ನವದೆಹಲಿ: ವೈಯಕ್ತಿಕವಾಗಿ ಯಾರನ್ನೂ ನಾನು ಟೀಕಿಸುವುದಿಲ್ಲ. ಚುನಾವಣೆಯೊಂದು ಧರ್ಮಯುದ್ಧ ಇದ್ದಂತೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಮಂಜುನಾಥ್ ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು ಸಂಜೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಇದೊಂದು ಧರ್ಮಯುದ್ಧ. ನಾನು ರಾಜಕೀಯಕ್ಕೆ ಬಂದಿರುವುದು ರಾಜಕೀಯ ಮಾಡುವುದಕ್ಕೆ ಅಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ. ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೋದಲೆಲ್ಲಾ ಪಾಸಿಟಿವ್ ಪ್ರತಿಕ್ರಿಯೆ ಬರುತ್ತಿದೆ. ಇದೊಂದು ಸೌಹಾರ್ದಯುತ ಭೇಟಿಯಾಗಿದೆ. ಇದುವರೆಗೂ ನಾನು ಅಮಿತ್ ಶಾ ಅವರನ್ನು ನೋಡಿರಲಿಲ್ಲ. ಇಂದು ಭೇಟಿಯಾಗಿ ಲೋಕಸಭಾ ಚುನಾವಣೆಗೆ ಅವರ ಸಹಕಾರ ಕೇಳಿದ್ದೇನೆ. ಬಿಜೆಪಿ ಪಕ್ಷದ ಸದಸ್ಯತ್ವ ಈಗಾಗಲೇ ಪಡೆದಿದ್ದೇನೆ. ಸೋಮವಾರ ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದು ತಿಳಿಸಿದರು.