ಮಂಡ್ಯ:ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ಡಿವೈಡರ್ ಮತ್ತು ತಂತಿ ಬೇಲಿಗೆ ಡಿಕ್ಕಿ ಹೊಡೆದು ಸರ್ವೀಸ್ ರಸ್ತೆಗೆ ಹಾರಿ ಪಕ್ಕದ ಹಳ್ಳಕ್ಕೆ ಉರುಳಿದೆ. ಮಂಡ್ಯದ ರಾಗಿಮುದ್ದನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ.
ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಒಂದು ಕಾರು, ನಾಲ್ಕು ಬೈಕ್ಗಳು ಜಖಂಗೊಂಡಿವೆ. ಬಸ್ ಚಾಲಕನ ಕಾಲು ಮುರಿದಿದೆ. ಏಳೆಂಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರನ್ನು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
''ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಅಪಘಾತ ಪ್ರಕರಣಗಳು ನಡೆಯುತ್ತಿವೆ. ರಸ್ತೆಯಲ್ಲಿ ಕ್ಯಾಮೆರಾಗಳನ್ನು ಹಾಕಿದ್ರೆ ಸಾಲದು, ತೀವ್ರ ತಿರುವು, ಹಳ್ಳ, ದಿಬ್ಬ ಹಾಗೂ ಅಪಾಯದ ಸ್ಥಳಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನೂ ಹಾಕಬೇಕು" ಎಂದು ಸ್ಥಳೀಯರಾದ ಕಿರಣ್ ಹೇಳಿದರು.
ವರ್ಷದ ಹಿಂದಷ್ಟೇ ಈ ಹೈವೇ ಲೋಕಾರ್ಪಣೆಯಾಗಿತ್ತು. ಸಾರ್ವಜನಿಕ ಸೇವೆಗೆ ಸಮರ್ಪಣೆಯಾದ ದಿನದಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ.