ಕರ್ನಾಟಕ

karnataka

'ತೆರಿಗೆ ಹಂಚಿಕೆಯಲ್ಲಿ ಅನ್ಯಾಯ': ಬಹಿರಂಗ ಚರ್ಚೆಗೆ ಬರುವಂತೆ ಸಚಿವ ಕೃಷ್ಣ ಬೈರೇಗೌಡ ಸವಾಲು - Krishna Byregowda

By ETV Bharat Karnataka Team

Published : Mar 26, 2024, 8:38 AM IST

Updated : Mar 26, 2024, 2:00 PM IST

ತೆರಿಗೆ ಹಂಚಿಕೆ ಅನುದಾನ ವಿಚಾರವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಹಿರಂಗ ಚರ್ಚೆಯ ಸವಾಲು ಹಾಕಿದ್ದಾರೆ.​

ಸೀತಾರಮನ್​ಗೆ ಸಚಿವ ಕೃಷ್ಣ ಬೈರೇಗೌಡ ಸವಾಲ್
ಸೀತಾರಮನ್​ಗೆ ಸಚಿವ ಕೃಷ್ಣ ಬೈರೇಗೌಡ ಸವಾಲ್

ಬಹಿರಂಗ ಚರ್ಚೆಗೆ ಬರುವಂತೆ ಸಚಿವ ಕೃಷ್ಣ ಬೈರೇಗೌಡ ಸವಾಲು

ಬೆಂಗಳೂರು: ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಮಾರ್ಚ್‌ 31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ಧರಿದ್ದಾರಾ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸವಾಲೆಸೆದಿದ್ದಾರೆ.

ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಹಂಚಿಕೆ ಬಾಕಿ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್, "ಕರ್ನಾಟಕಕ್ಕೆ ನೀಡಬೇಕಿರುವ ತೆರಿಗೆ ಪಾಲಿನಲ್ಲಿ ಯಾವುದೇ ಹಣ ಬಾಕಿ ಇಲ್ಲ" ಎಂದು ಹೇಳಿದ್ದರು. ಇದರ ಬೆನ್ನಲ್ಲೇ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೃಷ್ಣ ಬೈರೇಗೌಡ, ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಯಾವುದೇ ರಾಜ್ಯಕ್ಕೆ 2019-20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನ ಕೊಡುವಂತಿಲ್ಲ ಎಂದು ಹಣಕಾಸು ಆಯೋಗ ಹೇಳುತ್ತದೆ. 2019-20ರಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬಂದ ತೆರಿಗೆ ಪಾಲಿಗಿಂತ 2020-21ರಲ್ಲಿ 5,495 ಕೋಟಿ ರೂ ಹಣ ಕಡಿಮೆಯಾಗಿತ್ತು. ಈ ಹಣವನ್ನು ರಾಜ್ಯಕ್ಕೆ ತುಂಬಿಕೊಡಬೇಕು ಎಂದು ಸ್ವತಃ ಹಣಕಾಸು ಆಯೋಗ ಶಿಫಾರಸು ಮಾಡಿದರೂ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದದ್ದೇಕೆ ಎಂದು ಪ್ರಶ್ನಿಸಿದರು.

ರಾಜ್ಯದ ಪಾಲಿನ ನ್ಯಾಯಯುತ ತೆರಿಗೆ ಹಂಚಿಕೆ ನಷ್ಟ ಪರಿಹಾರ ಕೇಳಿದರೆ ನಿರ್ಮಲಾ ಸೀತಾರಾಮನ್ ಅವರು, 2021ನೇ ವರ್ಷದ ಅಂತಿಮ ವರದಿಯಲ್ಲಿ ಹಣಕಾಸು ಆಯೋಗ ಶಿಫಾರಸು ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಆಯೋಗದ ಅಂತಿಮ ವರದಿಯ 36ನೇ ಪುಟದಲ್ಲಿ ಕರ್ನಾಟಕಕ್ಕೆ ನಷ್ಟ ತುಂಬಿಕೊಡಬೇಕು ಎಂದು ಬರೆಯಲಾಗಿದೆಯಲ್ಲವೇ, ಇದೇನು? ಎಂದು ಅವರು ಕುಟುಕಿದರು.

2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ 36,675 ಕೋಟಿ ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ಕೇವಲ 31,180 ಕೋಟಿಗೆ ಕುಸಿದಿತ್ತು. ಹೀಗಾಗಿ ರಾಜ್ಯಕ್ಕೆ ಆಗಿರುವ ನಷ್ಟ 5,495 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. 2021-26ನೇ ಸಾಲಿನಲ್ಲಿ 6,000 ಕೋಟಿ ರೂ ಶಿಫಾರಸು ಮಾಡಲಾಗಿದೆ. ಒಟ್ಟಾರೆ, 11,495 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಿರುವುದು ಸುಳ್ಳು ಎನ್ನುತ್ತಿದ್ದಾರೆ ಎಂದರು.

ಅಸಲಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸೆಪ್ಟೆಂಬರ್ 17, 2020ರಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕೋರಿದ್ದರು. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಈ ಎಲ್ಲಾ ವಿಚಾರಗಳೂ ದಿನಪತ್ರಿಕೆಗಳಲ್ಲೂ ಸಹ ವರದಿಯಾಗಿತ್ತು. ಹಾಗಾದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರೂ ಸಹ ಸುಳ್ಳು ಹೇಳಿದ್ದರಾ ಎಂದು ಪ್ರಶ್ನಿಸಿದರು.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದೆಡೆ ಹಣಕಾಸು ಆಯೋಗದ ಒಂದೇ ಒಂದು ಶಿಫಾರಸನ್ನು ಸಹ ನಾವು ತಿದ್ದಲು ಹೋಗುವುದಿಲ್ಲ ಎನ್ನುತ್ತಾರೆ. ಮತ್ತೊಂದೆಡೆ, ರಾಜ್ಯಗಳಿಗೆ ನೀಡುವ ವಿಶೇಷ ಅನುದಾನವನ್ನು ಹಿಂಪಡೆಯುವಂತೆ ಹಣಕಾಸು ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಲೋಕಸಭೆಯಲ್ಲೇ ಉತ್ತರ ನೀಡುತ್ತಾರೆ. ಹಾಗಾದರೆ ರಾಜ್ಯದ ಪಾಲಿನ ಹಣವನ್ನು ತಡೆಹಿಡಿಯಲು ಮಾತ್ರ ಇವರ ಕಾನೂನುಗಳು ಇರುವುದಾ? ಎಂದರು.

ನಾವು ಕೇಳುತ್ತಿರುವುದು ಭಿಕ್ಷೆಯಲ್ಲ:ಹಣಕಾಸು ಆಯೋಗ ಶಿಫಾರಸು ಮಾಡಿದ ನಮ್ಮ ಅನುದಾನವನ್ನು ನಾವು ಸಂವಿಧಾನಾತ್ಮಕವಾಗಿಯೇ ಕೇಳುತ್ತಿದ್ದೇವೆಯೇ ವಿನಃ ನಾವೇನು ಭಿಕ್ಷೆ ಕೇಳುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ಹೊರಹಾಕಿದರು.

ಗ್ಯಾರಂಟಿಗೆ ಕೇಂದ್ರದಿಂದ ನಯಾಪೈಸೆ ಬೇಕಿಲ್ಲ:ಗ್ಯಾರಂಟಿಗೆ ಕೇಂದ್ರ ಸರ್ಕಾರದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ಗ್ಯಾರಂಟಿಗೆ ಬೇಕಾದ ಹಣವನ್ನು ನಾವೇ ಹೊಂದಿಸಿಕೊಳ್ಳುತ್ತಿದ್ದೇವೆ. ಗ್ಯಾರಂಟಿ ಜೊತೆಗೆ ನಿವೃತ್ತಿ ವೇತನ 11,200 ಕೋಟಿ ಹಣವನ್ನೂ ಸಹ ರಾಜ್ಯ ಸರ್ಕಾರವೇ ನೀಡುತ್ತಿದೆ. ಈ ಹಣದ ಪೈಕಿ ಕೇಂದ್ರ ಸರ್ಕಾರದ ಪಾಲು 550 ಕೋಟಿ ರೂ ಮಾತ್ರ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ:'ಮೋದಿ ಎಂದರೆ ಕಪಾಳಕ್ಕೆ ಹೊಡೆಯಿರಿ' ಎಂದ ತಂಗಡಗಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು - BJP Complaint

Last Updated : Mar 26, 2024, 2:00 PM IST

ABOUT THE AUTHOR

...view details