ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳಲು ಸರಕು ವಾಹನಗಳಾದ ಟಿಪ್ಪರ್ ಲಾರಿ, ಟೆಂಪೋ, ಗೂಡ್ಸ್ ಆಟೋಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಚರಿಸುತ್ತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆ ಹೆಚ್ಚಾಗಿತ್ತು. ಅಲ್ಲದೆ, ಅಪಘಾತ ಕೂಡ ಸಂಭವಿಸುತ್ತಿತ್ತು. ಈ ಬಗ್ಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಿತ್ತು.
ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ವಿಶ್ವವಿದ್ಯಾಲಯಕ್ಕೆ ಗೂಡ್ಸ್ ವಾಹನಗಳು ಪ್ರವೇಶಿಸಿದಂತೆ ನಿರ್ಬಂಧ ಹೇರಿ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ಎಸ್. ಎಂ. ಜಯಕರ್ ಹೇಳಿದ್ದಾರೆ.
ಉಲ್ಲಾಳ, ಮರಿಯಪ್ಪನಪಾಳ್ಯ, ನಾಗರಭಾವಿ ಸರ್ಕಲ್, ಜ್ಞಾನಭಾರತಿ ಕಡೆಯಿಂದ ಯಾವುದೇ ಸರಕು ವಾಹನಗಳು ವಿಶ್ವವಿದ್ಯಾಲಯ ಪ್ರವೇಶಿಸದಂತೆ ಆದೇಶಿಸಿ ಪರ್ಯಾಯ ಮಾರ್ಗವನ್ನು ಬಳಸಬೇಕೆಂದು ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿವಿಯು ಸೂಕ್ಷ್ಮ ಪ್ರದೇಶವಾಗಿದ್ದು, ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಿವೆ.