10 ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಹಿತ ಬಯಸಿಲ್ಲ: ಕೆಪಿಸಿಸಿ ವಕ್ತಾರ ಡಿ ಬಸವರಾಜ್ ದಾವಣಗೆರೆ: 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರು ರಾಜ್ಯದ ಹಿತ ಬಯಸಿಲ್ಲ. ನಮಗೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣ ಕೊಟ್ಟಿಲ್ಲ ಎಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಪರಿಹಾರವನ್ನು ಕೊಡಲಿಲ್ಲ, ವೈಮಾನಿಕ ಸಮೀಕ್ಷೆಯನ್ನು ನಡೆಸಲಿಲ್ಲ ಎಂದು ಟೀಕಿಸಿದರು.
ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿ ಕರ್ನಾಟಕವನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಅವರಿಗೆ ಭಾರತದ ಭೂಪಟದಲ್ಲಿ ಕರ್ನಾಟಕ ಇದೆ ಎಂದು ನೆನಪಿಗೆ ಬರುತ್ತದೆ. ಕೇಂದ್ರದಲ್ಲಿ ಖಾಲಿ ಇದ್ದ 30 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುವ ಕೆಲಸ ಅವರಿಂದ ಆಗಲಿಲ್ಲ. ಅದರಲ್ಲಿ 42 ಸಾವಿರ ಬ್ಯಾಕ್ ಲಾಗ್ ಹುದ್ದೆಗಳಿವೆ. ಅವುಗಳನ್ನು ಸಹ ಭರ್ತಿ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಕೇಂದ್ರದಿಂದ ಬರ ಪರಿಹಾರ ಪಡೆಯಲು ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇನೆ. ಅದರಂತೆ ತಮಿಳುನಾಡು, ಕೇರಳ ರಾಜ್ಯಗಳು ಸುಪ್ರೀಂ ಮೆಟ್ಟಿಲೇರಿವೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ಮೋದಿ ಸರ್ಕಾರ ಹಾಳು ಮಾಡಿದೆ. ಸರ್ವಾಧಿಕಾರಿ ರೀತಿಯ ಆಡಳಿತವನ್ನು ಮೋದಿ ಸರ್ಕಾರದ ಅವಧಿಯಲ್ಲಿ ನೋಡಿದ್ದೇವೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದ್ದಾಗ ಯಾರೊಬ್ಬ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಿರಲಿಲ್ಲ. ಮೋದಿ ಆಡಳಿತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೆಹಲಿ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಿದ್ದಾರೆ. ಕೇಜ್ರಿವಾಲ್ ಹೊರಗೆ ಇದ್ದರೆ ದೆಹಲಿಯಲ್ಲಿ ಒಂದು ಸ್ಥಾನ ಗೆಲ್ಲಲು ಆಗುವುದಿಲ್ಲ ಎಂದು ಸುಖಾಸುಮ್ಮನೆ ಅವರನ್ನು ಜೈಲಿಗೆ ಹಾಕಿದ್ದಾರೆ ಎಂದು ದೂರಿದರು.
''ನಾಳೆ ಮೈಸೂರು, ಮಂಗಳೂರಿಗೆ ಬರುತ್ತಿರುವ ಪ್ರಧಾನಿ ಮೋದಿಗೆ ಅಲ್ಲಿನ ಜನ ಮಂಗಳಾರತಿ ಮಾಡಬೇಕು, ಪ್ರಜ್ಞಾವಂತ ಮತದಾರರು ಪ್ರಜಾಪ್ರಭುತ್ವ ಉಳಿಸಲು ಮೋದಿ ಪ್ರಚಾರಕ್ಕೆ ಬಂದಾಗ ಅವರನ್ನು ತಿರಸ್ಕಾರ ಮಾಡಬೇಕು. ಸಂವಿಧಾನ ಉಳಿಸುವ ಬಗ್ಗೆ ಮಾತನಾಡುವ ಇವರಿಗೆ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಪಕ್ಷದಿಂದ ಕಿತ್ತು ಹಾಕಲು ಆಗಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯ ತಮ್ಮ ಕಚೇರಿಯಿಂದ ಮಹರ್ಷಿ ವಾಲ್ಮೀಕಿ, ಅಂಬೇಡ್ಕರ್ ಫೋಟೋಗಳನ್ನು ತೆಗೆಸಿ ಹಾಕಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ, ಇವರಿಗೆ ಸಂವಿಧಾನ ಗೊತ್ತಿಲ್ಲ, ವೋಟಿಗಾಗಿ ಮುಖವಾಡ ಧರಿಸುತ್ತಾರೆ'' ಎಂದು ಡಿ ಬಸವರಾಜ್ ಆರೋಪಿಸಿದರು.
ಇದನ್ನೂ ಓದಿ:ಲೋಕಸಭೆ ಚುನಾವಣಾ ಪ್ರಚಾರ; ನಾಳೆ ಮೈಸೂರಿನಲ್ಲಿ ಪ್ರಧಾನಿ ಮೋದಿ - ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಮಾಗಮ - pm Modi mysuru visit