ಗಂಗಾವತಿ(ಕೊಪ್ಪಳ): ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣ ನೀರು ನದಿಗೆ ಹರಿಸಿದ್ದರ ಪರಿಣಾಮ, ಕಳೆದ ಹತ್ತು ದಿನಗಳಿಂದ ಕಂಪ್ಲಿ ಸೇತುವೆ ಮಳುಗಿತ್ತು. ಈಗ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಸಂಚಾರ ಪುನರಾರಂಭಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ನದಿ ನೀರಿನಲ್ಲಿ ಮುಳುಗಡೆಯಾಗಿದ್ದ ಗಂಗಾವತಿ ತಾಲ್ಲೂಕಿನ ಲಿಂಗಸಗೂರು-ಕುಡತಿನಿ (ರಾಜ್ಯ ಹೆದ್ದಾರಿ-29) ಚಿಕ್ಕಜಂತಕಲ್-ಕಂಪ್ಲಿ ಮಧ್ಯದ ಸೇತುವೆ ಮೇಲೆ ತಾತ್ಕಾಲಿಕ ಪಾದಚಾರಿಗಳು ಮಾತ್ರ ಸಂಚರಿಸಬಹುದು. ಆದರೆ ಸೇತುವೆ ಮೇಲೆ ಪೂರ್ಣ ಪ್ರಮಾಣದಲ್ಲಿ ಈ ಮೊದಲಿನಂತೆ ಸಾರಿಗೆ ಇಲಾಖೆಯ ವಾಹನಗಳು, ಲಘು-ಭಾರೀ ಗಾತ್ರದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಸಿರು ನಿಶಾನೆ ತೋರಿಲ್ಲ.
ಪಾದಚಾರಿಗಳ ಸಂಚಾರಕ್ಕೆ ಮುಕ್ತವಾದ ಕಂಪ್ಲಿ ಸೇತುವೆ (ETV Bharat) ಸೇತುವೆಯ ಪೂರ್ಣ ಪ್ರಮಾಣದ ಗುಣಮಟ್ಟ, ಬಾಳಿಕೆಯ ಸಾಮರ್ಥ್ಯ ಪರಿಶೀಲಿಸಬೇಕಿದೆ. ಮೊದಲ ಹಂತದಲ್ಲಿ ಸುರಕ್ಷತಾ ವಿಧಾನಗಳನ್ನು ಅನುರಿಸಿ ಸೇತುವೆ ಮೇಲೆ ಕೇವಲ ಪಾದಚಾರಿಗಳು ಸಂಚರಿಸಬಹುದು ಎಂದು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಸೇತುವೆ ಮುಳುಗಡೆಯಾಗಿದ್ದರಿಂದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಮಧ್ಯೆ ನೇರ ರಸ್ತೆ ಸಂಪರ್ಕ ಸ್ಥಗಿತವಾಗಿತ್ತು.
ಬಳ್ಳಾರಿ ಮತ್ತು ಗಂಗಾವತಿ ಭಾಗದ ವಾಹನಗಳು ಕಂಪ್ಲಿ ಸೇತುವೆ ದಡಗಳವರೆಗೂ ಜನರನ್ನು ಸಾಗಿಸುತ್ತಿವೆ. ಅಲ್ಲಿಂದ ಜನ ಸೇತುವೆಯನ್ನು ಕಾಲ್ನಡಿಗೆ ಮೂಲಕ ದಾಟಿ ಮತ್ತೆ ವಾಹನಗಳನ್ನು ಹಿಡಿದು ಬಳ್ಳಾರಿ ಅಥವಾ ಗಂಗಾವತಿಗೆ ಹೋಗುತ್ತಿದ್ದಾರೆ.
ಇದನ್ನೂ ಓದಿ:ಕಾರವಾರ: ಕುಸಿದು ಬಿದ್ದ ಕಾಳಿ ನದಿ ಸೇತುವೆ ನೋಡಲು ಜನದಟ್ಟಣೆ; ಹೈರಾಣಾದ ಪೊಲೀಸರು - Kali River Bridge Collapse