ಕೋಲಾರ ಲೋಕಸಭಾ ಕ್ಷೇತ್ರ:ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು71 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಮಲ್ಲೇಶ್ ಬಾಬು 6,91,481 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಸೋಲು ಕಂಡಿದ್ದಾರೆ.
- ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು - 6,91,481 ಮತಗಳು.
- ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ - 6,20,093 ಮತಗಳು.
- ಮತಗಳ ಅಂತರ: 71,388 ಮತಗಳು.
ತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ ಮೀಸಲು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ವಿ. ಗೌತಮ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿಯ ಎನ್‌ಡಿಎ ಅಭ್ಯರ್ಥಿಯಾಗಿ ಮಲ್ಲೇಶ್‌ಬಾಬು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಜೆಡಿಎಸ್ನ ಮಲ್ಲೇಶ್ ಬಾಬು ಸತತ ಮುನ್ನಡೆ ಸಾಧಿಸಿ, ಇದೀಗ ವಿಜಯ ಪತಾಕೆ ಹಾರಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಎಂಟೂ ಕ್ಷೇತ್ರಗಳಲ್ಲಿ ಮಹಿಳಾ ಮತದಾರರದ್ದೇ ಮೇಲುಗೈ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದರು. ಚುನಾವಣೆ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಬಿಜೆಪಿ - ಜೆಡಿಎಸ್ ಮೈತ್ರಿಯ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬು ಪರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೈ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಆದಿಯಾಗಿ ಹಲವರು ಭರ್ಜರಿ ಪ್ರಚಾರ ಕೈಗೊಂಡಿದ್ದರು. ಎಲ್ಲ ಘಟಾನುಘಟಿಗಳು ಕ್ಷೇತ್ರದ ಮತದಾರರ ಗಮನ ಸೆಳೆಯುಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.