ಕರ್ನಾಟಕ

karnataka

ETV Bharat / state

ಇನ್ಮುಂದೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಲು ರಾಜ್ಯ ಸರ್ಕಾರದ ಚಿಂತನೆ: ಜಾರಿಯಾಗಲಿದೆಯಾ 'ಗೃಹ ಆರೋಗ್ಯ ಯೋಜನೆ'! - GRUHA AROGYA SCHEME

ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ 'ಗೃಹ ಆರೋಗ್ಯ ಯೋಜನೆ' ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

By ETV Bharat Karnataka Team

Published : Jul 8, 2024, 7:43 PM IST

ಜಾರಿಯಾಗಲಿದೆಯಾ 'ಗೃಹ ಆರೋಗ್ಯ ಯೋಜನೆ'!
ಜಾರಿಯಾಗಲಿದೆಯಾ 'ಗೃಹ ಆರೋಗ್ಯ ಯೋಜನೆ'! (ಸಂಗ್ರಹ ಚಿತ್ರ)

ಬೆಂಗಳೂರು:ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ಮನೆಬಾಗಿಲಿಗೆ ಔಷಧ ಪೆಟ್ಟಿಗೆ ವಿತರಿಸುವ ಮಹತ್ವಾಕಾಂಕ್ಷಿ 'ಗೃಹ ಆರೋಗ್ಯ ಯೋಜನೆ'ಜಾರಿಗೆ ತಯಾರಿ ನಡೆಸುತ್ತಿದೆ.

ರಾಜ್ಯದಲ್ಲಿ ಈಗಾಗಲೇ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ಪ್ರತಿಯೊಬ್ಬರ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸಿ ಆರೋಗ್ಯ ತಪಾಸಣೆ ನಡೆಸುವ ನಿಟ್ಟಿನಲ್ಲಿ ಈ ಹೊಸ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ಲೋಕಸಭೆ ಚುನಾವಣೆ ಇದ್ದ ಕಾರಣ ನೀತಿ ಸಂಹಿತೆ ಜಾರಿಯಾಗಿತ್ತು. ಹಾಗಾಗಿ, ಈ ಯೋಜನೆ ಜಾರಿಗೆ ವಿಳಂಬವಾಗಿತ್ತು. ಇದೀಗ ಗೃಹ ಆರೋಗ್ಯ ಯೋಜನೆಯನ್ನು ಎಂಟು ಜಿಲ್ಲೆಗಳಲ್ಲಿ ಜಾರಿ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವೈದ್ಯರ ತಂಡವು ಮನೆ ಮನೆಗೆ ಭೇಟಿ ಮಾಡಿ ಆಯ್ದ ಸಮಸ್ಯೆಗಳಿಗೆ ಉಚಿತವಾಗಿ ಔಷಧ ಒದಗಿಸುವ 'ಗೃಹ ಆರೋಗ್ಯ' ಯೋಜನೆಯಾಗಿದೆ. ಈಗಾಗಲೇ ಗೃಹ ಆರೋಗ್ಯ ಯೋಜನೆಗೆ ರೂಪುರೇಷ ಸಿದ್ದವಾಗಿದ್ದು, ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಸುಮಾರು 96 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಯಾಗುತ್ತಿದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ವಿತರಿಸಲಾಗುತ್ತದೆ. ಮನೆ ಮನೆ ಆರೋಗ್ಯ ತಪಾಸಣೆ ವೇಳೆ ಸಮಸ್ಯೆ ದೃಢಪಟ್ಟವರಿಗೆ ಹಾಗೂ ಈಗಾಗಲೇ ಸಮಸ್ಯೆ ಇರುವವರಿಗೆ 90 ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆಗಳನ್ನು ಉಚಿತವಾಗಿ ನೀಡುವುದು ಯೋಜನೆಯ ಉದ್ದೇಶ. ದೊಡ್ಡ ಕಾರ್ಯಕ್ರಮ ಮಾಡುವ ಮೂಲಕ ಈ ಯೋಜನೆಗೆ ಚಾಲನೆ ಕೊಡಲು ಆರೋಗ್ಯ ಇಲಾಖೆ ಪ್ಲಾನ್ ಮಾಡಿಕೊಂಡಿದೆ.

ಮೊದಲ ಬಾರಿಗೆ ನೀಡಿದ ಮಾತ್ರೆಗಳು ಖಾಲಿಯಾದ ಬಳಿಕ ಮತ್ತೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ತಲುಪಿಸಲಾಗುತ್ತದೆ. 30 ವರ್ಷ ಮೇಲ್ಪಟ್ಟವರು ಮಾತ್ರೆಗಳನ್ನು ಪಡೆಯಲು ಅರ್ಹರು. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ತಲಾ ಮೂರು ಮಾದರಿ ಮಾತ್ರೆಗಳನ್ನು ಸರ್ಕಾರ ಗುರುತಿಸಿದೆ. ಅವುಗಳನ್ನು ಮಾತ್ರವೇ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಪಾಸಣಾ ತಂಡವು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ತಲಾ 20 ಮನೆಗಳಿಗೆ ಭೇಟಿ ನೀಡಲಿದೆ. ಈ ವೇಳೆ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸ‌ರ್ ಪತ್ತೆಗೂ ತಪಾಸಣೆ ನಡೆಸಲಿದೆ. ಕ್ಯಾನ್ಸ‌ರ್ ದೃಢಪಟ್ಟಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಮನೆ ಮನೆ ಭೇಟಿ ದೃಢಪಡಿಸಲು ಮನೆಗಳಿಗೆ ಸ್ಟಿಕರ್​ಗಳನ್ನು ಅಂಟಿಸಲಾಗುವುದು ಎಂದು ಹೇಳಿದ್ದಾರೆ.

ತರಬೇತಿ:ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಕಣ್ಣಾವಲು ಅಧಿಕಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತರಬೇತಿ ಸಹ ನೀಡಲಾಗುತ್ತಿದೆ. ಇವರು ಜಿಲ್ಲೆಗಳಲ್ಲಿ ಸಭೆ ನಡೆಸಿ, ವೈದ್ಯಾಧಿಕಾರಿಗಳಿಗೆ ಹಾಗೂ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿ ಮುಖ್ಯ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರಿಗೆ ತರಬೇತಿ ನೀಡಲಿದ್ದಾರೆ.

ಮಾತ್ರೆಗಳು ಯಾವುವು? : ರಕ್ತದ ಒತ್ತಡಕ್ಕೆ ಅಪ್ಲೋಡಿಪೈನ್ 5 ಎಂಜಿ, ಟೆಲ್ಮಿಸಾರ್ಟನ್ 40 ಮತ್ತು 80 ಎಂಜಿ, ಹೈಡೋ ಕ್ಲೋರೋಥಿಯಾಜೈಡ್ 12.5 ಎಂಜಿ, ಮಧುಮೇಹಕ್ಕೆ ಮೆಟ್ ಫಾರ್ಮಿನ್ ಎಸ್​ಆರ್​ 500 ಎಂಜಿ, ಮೆಟ್ ಫಾರ್ಮಿನ್ ಎಸ್​ಆರ್​ 1000 ಎಂಜಿ ಮತ್ತು ಗ್ಲಿಮೆಪಿರೈಡ್ 1 ಎಂಜಿ ಮಾತ್ರೆಗಳನ್ನು ಗುರುತಿಸಲಾಗಿದೆ. ಔಷಧ ಪಡೆದ ವ್ಯಕ್ತಿಯ ಹೆಸರು ಹಾಗೂ ವಿವರಗಳನ್ನು ಆರೋಗ್ಯ ಇಲಾಖೆ ದಾಖಲಿಸಿಕೊಳ್ಳಲಿದೆ.

"ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ 'ಗೃಹ ಆರೋಗ್ಯ ಯೋಜನೆ' ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಆಯ್ದ ಸಮಸ್ಯೆಗಳಿಗೆ ಉಚಿತವಾಗಿ ಔಷಧ ದೊರೆಯಲಿದೆ. ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಗೃಹ ಆರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ನಂತರ ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ಎಲ್ಲ ಜಿಲ್ಲೆಗಳಿಗೆ ವಿಸ್ತರಣೆಯಾಗಲಿದೆ " ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಸ್ಥಿತಿ ಇಲ್ಲ, ಡೆಂಗ್ಯೂ ಸೊಳ್ಳೆಗಿಂತ ಬಿಜೆಪಿ ಸುಳ್ಳುಗಳನ್ನೇ ಹೆಚ್ಚು ಹರಡುತ್ತಿದೆ: ಗುಂಡೂರಾವ್ - Minister Dinesh Gundurao

ABOUT THE AUTHOR

...view details