ಬೆಳಗಾವಿ: "ಕೆಎಲ್ಇ ಸಂಸ್ಥೆ ನನ್ನ ರಕ್ತದಲ್ಲಿ ಬೆರೆತು ನಿಂತಿದೆ. ನಾನು ಏನೇ ಆಗಿರಲಿ, ಏನೇ ಪದವಿ-ಪ್ರಶಸ್ತಿಗಳಿಗೆ ಭಾಜನ ಆಗಿರಲಿ, ಇದೆಲ್ಲ ಕೆಎಲ್ಇ ಸಂಸ್ಥೆಯಿಂದಲೇ ಎಂಬುದನ್ನು ಪ್ರಾಂಜಲ ಮನಸ್ಸಿನಿಂದ ಹೇಳಬಲ್ಲೆ. ಎಲ್ಲಿಯವರೆಗೆ ನನ್ನಲ್ಲಿ ಶಕ್ತಿಯಿದೆಯೋ ನಾನು ಸಂಸ್ಥೆಗಾಗಿ ಹಾಗೂ ಸಮಾಜಕ್ಕಾಗಿ ದುಡಿಯುತ್ತೇನೆ"ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಹೇಳಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷಗಳನ್ನು ಪೂರೈಸಿದ ನಿಮಿತ್ತವಾಗಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕೆಎಲ್ಇ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. "ಕೆಎಲ್ಇ ಸಂಸ್ಥೆಯೇ ನನಗೆ ಸರ್ವಸ್ವ, ಸಪ್ತರ್ಷಿಗಳ ನೆನಹೆ ನನಗೆ ಉದಯ. ಅವರ ಮರೆವೇ ನನಗೆ ಅಸ್ತಮಾನ. ಅಂತಹ ಕೆ.ಎಲ್.ಇ. ಕಟ್ಟಿ ಬೆಳೆಸಿದ ಸಂಸ್ಥಾಪಕರನ್ನು ಶಿಕ್ಷಣ ಪರಿವಾರದವರನ್ನು ಮನಸಾರೆ ಸ್ಮರಿಸುತ್ತೇನೆ. ಕೆಎಲ್ಇ ಸಂಸ್ಥೆಯೇ ನನಗೆ ಏನೆಲ್ಲವನ್ನೂ ನೀಡಿದೆ, ಬೆಳೆಸಿದೆ. ಆದ್ದರಿಂದ ಸಮಾಜಕ್ಕಾಗಿ ನನಗೆ ಸಾಧ್ಯವಾದಷ್ಟು ಸೇವೆಯನ್ನು ನೀಡಲು ಪ್ರಯತ್ನಿಸಿದ್ದೇನೆ" ಎಂದರು.
"ನಾನು ಪುಟ್ಟ ಅಂಕಲಿ ಗ್ರಾಮದಿಂದ ಬಂದವನು. ಒಂದು ಮಹಾಸಂಸ್ಥೆಯ ಕಾರ್ಯಾಧ್ಯಕ್ಷನಾಗಿ ಆಯ್ಕೆಯಾಗಿ 40 ವರ್ಷಗಳ ಕಾಲ ಮುನ್ನಡೆಸಿ ವಿಶ್ವಮಾನ್ಯ ಮಾಡಿದ್ದು ಪವಾಡವೇ. ಜಗತ್ತಿನಲ್ಲಿಯ ಅತ್ಯುತ್ತಮವಾದದ್ದನ್ನು ನೋಡಿದಾಗ ಅದನ್ನು ನಮ್ಮ ಕೆಎಲ್ಇ ಸಂಸ್ಥೆಯಲ್ಲಿಯೂ ಅಳವಡಿಸಿಕೊಳ್ಳುತ್ತಾ ಹೋದೆ. ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದವರು 7 ಜನ ಶಿಕ್ಷಕರು, ಅವರ ತ್ಯಾಗ ಬಹುದೊಡ್ಡದು. ಅಂತಹ ಅಸಂಖ್ಯ ಶಿಕ್ಷಕರು ಇಲ್ಲಿ ತನು-ಮನ-ಧನದಿಂದ ದುಡಿದಿದ್ದಾರೆ. ಅವರು ಗುಣಾತ್ಮಕವಾದ ಶಿಕ್ಷಣವನ್ನು ನೀಡಿದ್ದರ ಫಲವೇ ಕೆಎಲ್ಇ ಸಂಸ್ಥೆಯು ಅಗಾಧವಾಗಿ ಬೆಳೆಯಲು ಸಾಧ್ಯವಾಯಿತು" ಡಾ. ಕೋರೆ ಸ್ಮರಿಸಿದರು.
"ನನಗೆ ಸಹಕಾರ ನೀಡಿದವರನ್ನು ಸ್ಮರಿಸುವೆ. ನಾನು ಒಬ್ಬನೇ ಕೆ.ಎಲ್.ಇ. ಸಾಧನೆಗಳಿಗೆ ಕಾರಣನಾದೆ ಎಂಬ 'ಅಹಂ' ನನಗಿಲ್ಲ, ಒಬ್ಬನಿಂದ ಏನೂ ಆಗಲಾರದು. ನನಗೆ 40 ವರ್ಷಗಳ ಕಾಲ ತೆರೆದ ಮನಸ್ಸಿನ ಸಹಕಾರ ನೀಡಿದ ನನ್ನ ಆಡಳಿತ ಮಂಡಳಿ ಸದಸ್ಯರ ಸಕಾರಾತ್ಮಕ ನಿಲುವುಗಳಿಂದ ನಾನು ಯಶಸ್ವಿಯಾದೆ. ಅನೇಕ ಬಾರಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾಗಿ ಯಶಸ್ವಿಯಾದೆ, ಚುನಾವಣೆಗಳನ್ನು ತಪ್ಪಿಸಿದೆ" ಎಂದರು.
"ನಮ್ಮ ಸಂಸ್ಥೆಯನ್ನು ದಾನಿಗಳ ಉದಾರ ಕೊಡುಗೆಯಿಂದಲೇ 38 ಸಂಸ್ಥೆಗಳಿಂದ 310ಕ್ಕೆ ವಿಸ್ತರಿಸಿದ್ದು ನಿಜವಾದ ಇತಿಹಾಸ. ಕರ್ನಾಟಕ ಹಾಗೂ ಮಹಾರಾಷ್ಟ್ರ ಮೊದಲ್ಗೊಂಡು 16 ಆಸ್ಪತ್ರೆಗಳು ಕಾರ್ಯನಿರ್ವಸುತ್ತ ಅಂತಾರಾಷ್ಟ್ರೀಯ ಮಾನ್ಯತೆ ಸಂಪಾದಿಸಿರುವುದು ನನಗೆ ಖುಷಿ ಕೊಟ್ಟಿದೆ. ಅಲೋಪಥಿಕ್-ಆಯುರ್ವೇದ-ಹೋಮಿಯೋಪಥಿಕ್ ಈ 3ನ್ನು ಜನಸೇವೆಗೆ ಅರ್ಪಿಸಿದ್ದೇನೆ" ಎಂದು ಡಾ. ಪ್ರಭಾಕರ್ ಕೋರೆ ಹರ್ಷ ವ್ಯಕ್ತಪಡಿಸಿದರು.