ಬೆಳಗಾವಿ:ನ್ಯಾಯ, ಸಮಾನತೆ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ತ್ಯಾಗದ ಮಾರ್ಗದರ್ಶಿ ತತ್ವಾದರ್ಶಗಳ ಮೇಲೆ ಸಮಾಜವನ್ನು ನಿರ್ಮಿಸಿದ ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳ ಮಹೋನ್ನತ ಉದ್ದೇಶ ಇಂದು ದೇಶದ ಪ್ರಗತಿಯಲ್ಲಿ ಕಂಡು ಬರುತ್ತಿದೆ. ನಂಬಲು ಅಸಾಧ್ಯವೆನಿಸುವ ವೈದ್ಯಕೀಯ ಮೂಲಸೌಕರ್ಯಗಳನ್ನು ಕಲ್ಪಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ ಹರ್ಷ ವ್ಯಕ್ತಪಡಿಸಿದರು.
ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ) ಸ್ವಾಯತ್ತ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪದವಿ ಪಡೆಯುವುದು ಕಠಿಣ ಪರಿಶ್ರಮದ ಫಲವಾಗಿದೆ. ಯುವ ಪದವೀಧರರು ಮಾನವೀಯತೆಯ ಪ್ರತಿಬಿಂಬವಾಗಿ ಸೇವೆ ಸಲ್ಲಿಸುತ್ತ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಬೇಕು. ಅದೊಂದು ಜೀವನದ ಪ್ರಮುಖ ತಿರುವು ಆಗಬೇಕು ಎಂದು ಸಲಹೆ ನೀಡಿದರು.
ದೇಶದ 5 ಸಾವಿರ ವರ್ಷಗಳಷ್ಟು ಹಳೆಯ ನಾಗರಿಕತೆಯು ಆನುವಂಶಿಕವಾಗಿ ಶಕ್ತಿಯನ್ನು ಪಡೆದುಕೊಂಡಿದೆ. ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ವಿಶ್ವದಾದ್ಯಂತ ಭಾರತದ ಯುವಕರ ಧ್ವನಿ ಕೇಳಿ ಬರುತ್ತಿದೆ. ಯುವಕರು ಭಾರತದ ಅಭಿವೃದ್ಧಿ ಪಥದಲ್ಲಿ ಪ್ರಮುಖ ಪಾತ್ರವಹಿಸುತ್ತ, ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಉಪರಾಷ್ಟ್ರಪತಿಗಳು ಕರೆ ನೀಡಿದರು.
ಭಾರತವು ಅತ್ಯಧಿಕ ಸಂಖ್ಯೆಯ ಸ್ಟಾರ್ಟ್ ಅಪ್‌ಗಳು, ಯುನಿಕಾರ್ನ್‌ಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುವ ವೈದ್ಯರು ತಮ್ಮ ನಿಜವಾದ ಸಾಮರ್ಥ್ಯವನ್ನು ಹೊರಹಾಕಿ, ಕನಸುಗಳನ್ನು ಈಡೇರಿಸಿಕೊಳ್ಳಬೇಕು. ವೈದ್ಯಕೀಯ ಸೇವೆಯ ಪ್ರಾಥಮಿಕ ಧ್ಯೇಯ ವಾಕ್ಯ ಹಣವಲ್ಲ, ಅದೊಂದು ಸೇವೆ ಎಂದು ಪರಿಗಣಿಸಿ ಸೇವೆ ಒದಗಿಸಿ. ಅದರಲ್ಲಿಯೂ ಮುಖ್ಯವಾಗಿ ಹಳ್ಳಿಗರ ಸೇವೆಯಲ್ಲಿ ತೊಡಗಬೇಕು, ಶಿಕ್ಷಣದಿಂದ ಮಾತ್ರ ದೇಶವು ಸಾಮಾಜಿಕ-ಆರ್ಥಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಬಹುದು ಎಂಬುದನ್ನು ಅರಿತ ಕೆಎಲ್‌ಇ ಸಂಸ್ಥೆಯು ಆ ಕನಸನ್ನು ನನಸು ಮಾಡುತ್ತಿದೆ ಎಂದು ಶ್ಲಾಘಿಸಿದರು.