ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ‘ಮಹಾಕುಂಭಮೇಳ’ಕ್ಕೆ ಹೋಗುವ ಭಕ್ತಾಧಿಗಳ ಅನುಕೂಲಕ್ಕಾಗಿ ಸಾಂದರ್ಭಿಕ ಒಪ್ಪಂದದ ಮೇರೆಗೆ ವಿಶೇಷ ಬಸ್ಗಳನ್ನು ಒದಗಿಸಲಾಗುತ್ತಿದೆ ಎಂದು ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದ ಡಿಟಿಒ ಚಾಮರಾಜ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಸ್ಗಳನ್ನ ಪ್ರಾಸಂಗಿಕ ಕರಾರಿನ ಮೇರೆಗೆ ಕೊಡುತ್ತಿದ್ದೇವೆ. ಮದುವೆ, ಶಾಲಾ ಪ್ರವಾಸಕ್ಕೆ ಕೊಡುವಂತೆ ಬಸ್ಗಳನ್ನು ಸಿಸಿ ಕೊಡುತ್ತಿದ್ದೇವೆ. ಯಾರಾದ್ರೂ 50 ಜನ ಗುಂಪಾಗಿ ಬಂದು ಪ್ಯಾಸೆಂಜರ್ ಲಿಸ್ಟ್ ಕೊಟ್ಟರೆ, ಅದನ್ನ ಹಾಗೂ ವಾಹನದ ನಂಬರ್ನ್ನು ನಾವು ಆರ್ಟಿಒ ಆಫೀಸ್ಗೆ ಸಲ್ಲಿಸುತ್ತೇವೆ. ನಂತರ ಅವರಿಂದ ಅನುಮತಿ ಪಡೆದು ಬಸ್ನ್ನ ಓಡಿಸುತ್ತೇವೆ. ಒಂದು ವಾರ ಮುಂಚಿತವಾಗಿ ಬಂದು ಅರ್ಜಿ ಸಲ್ಲಿಸಬೇಕು ಎಂದರು.
ಬಳ್ಳಾರಿ, ಮೋಕಾ, ಕುರುಗೋಡು, ಕಂಪ್ಲಿ, ಎಮ್ಮಿಗನೂರು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ, ತೋರಣಗಲ್ಲು, ಸಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ‘ಮಹಾಕುಂಭಮೇಳ’ಕ್ಕೆ ಹೋಗುವ ಭಕ್ತಾಧಿಗಳ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.