ಕರ್ನಾಟಕ

karnataka

ETV Bharat / state

ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ ಕಿತ್ತೂರು: ಆಕರ್ಷಕ ವಿದ್ಯುತ್​ ದೀಪಗಳಿಂದ ಚನ್ನಮ್ಮನ ನಾಡು ಕಲರ್‌ಫುಲ್‌ - KITTUR UTSAVA

ಕಿತ್ತೂರು ರಾಣಿ ಚೆನ್ನಮ್ಮಳ 200ನೇ ವಿಜಯೋತ್ಸವ ಆಚರಣೆಗೆ ಕಿತ್ತೂರು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ನಗರದೆಲ್ಲೆಡೆ ಆಕರ್ಷಕ ವಿದ್ಯುತ್​ ದೀಪಾಲಂಕಾರ ಮಾಡಲಾಗಿದೆ.

Lightings in Kittur
ಮದುವಣಗಿತ್ತಿಯಂತೆ ಶೃಂಗಾರಗೊಂಡ ಕಿತ್ತೂರು (ETV Bharat)

By ETV Bharat Karnataka Team

Published : Oct 22, 2024, 10:48 PM IST

Updated : Oct 22, 2024, 10:56 PM IST

ಬೆಳಗಾವಿ: ವೀರರಾಣಿ ಚನ್ನಮ್ಮಳ 200ನೇ ವಿಜಯೋತ್ಸವದ ಸಂಭ್ರಮಕ್ಕೆ ಕಿತ್ತೂರು ಮದುವಣಗಿತ್ತಿಯಂತೆ ಸಜ್ಜಾಗಿದೆ. ಝಗಮಗಿಸುವ ವಿದ್ಯುತ್ ದೀಪಗಳಿಂದ ಕಿತ್ತೂರಿನ ಬೀದಿಗಳು ಕಂಗೊಳಿಸುತ್ತಿವೆ. ನಾಡಿನ ವಿವಿಧೆಡೆಯಿಂದ ಬರುವ ಜನರನ್ನು ಸ್ವಾಗತಿಸಲು ಕಿತ್ತೂರು ನಾಡು ಸನ್ನದ್ಧಗೊಂಡಿದೆ.

ಅ.23, 24 ಮತ್ತು 25ರಂದು ಮೂರು ದಿನ ಅದ್ಧೂರಿ ಕಿತ್ತೂರು ಉತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಐತಿಹಾಸಿಕ ಕಿತ್ತೂರು ಕೋಟೆ, ರಾಣಿ ಚನ್ನಮ್ಮನ ಪ್ರತಿಮೆ, ವೃತ್ತ, ಮೆರವಣಿಗೆ ಮಾರ್ಗ, ಕೋಟೆ ಆವರಣ ಸೇರಿದಂತೆ ಇಡೀ ಕಿತ್ತೂರು ಪಟ್ಟಣಕ್ಕೆ ದೀಪಾಲಂಕಾರ ಮಾಡಲಾಗಿದೆ. 6 ಸಾವಿರ ಬಲ್ಬ್, 3 ಸಾವಿರ ಎಲ್ಇಡಿ ಥ್ರೀಡಿ ಡಿಸೈನ್ ಲೈಟಿಂಗ್, 6 ಸಾವಿರ ಲೈಟ್ ಸರಗಳನ್ನು ಪಟ್ಟಣದ ನಾನಾ ಕಡೆ ಅಳವಡಿಸಲಾಗಿದೆ.

ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ ಕಿತ್ತೂರು (ETV Bharat)

ವರ್ಣಚಿತ್ರಗಳ ಆಕರ್ಷಣೆ:ರಾಷ್ಟ್ರೀಯ ಹೆದ್ದಾರಿ ಗೋಡೆಗಳ ಮೇಲೆ ಬಿಡಿಸಿರುವ ಕಿತ್ತೂರು ಸಂಸ್ಥಾನದ ಇತಿಹಾಸ ಹಾಗೂ ರಾಣಿ ಚನ್ನಮ್ಮ ಯುದ್ಧದಲ್ಲಿ ಭಾಗವಹಿಸಿದ ಸನ್ನಿವೇಷಗಳನ್ನು ಸಾರುವ ವರ್ಣರಂಜಿತ ಚಿತ್ರಗಳು ಗಮನ ಸೆಳೆಯುತ್ತಿವೆ. ಆಂಗ್ಲರ ವಿರುದ್ಧ ಚನ್ನಮ್ಮ ರಣರಂಗದಲ್ಲಿ ಹೋರಾಡುತ್ತಿರುವ, ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಸೆರೆ ಹಿಡಿದ ದೃಶ್ಯ, ಜೈಲಿನಲ್ಲಿ ಚನ್ನಮ್ಮಾಜಿಯನ್ನು ಸಂಗೊಳ್ಳಿ ರಾಯಣ್ಣ ಮಾರುವೇಷದಲ್ಲಿ ಭೇಟಿಯಾದ ಸನ್ನಿವೇಷ, ಕಿತ್ತೂರು ಸಂಸ್ಥಾನದ ನಂದಿಧ್ವಜ, ಥ್ಯಾಕರೆಯನ್ನು ಅಮಟೂರ ಬಾಳಪ್ಪ ಗುಂಡಿಟ್ಟು ಹತ್ಯೆ ಮಾಡಿದ್ದೂ ಸೇರಿ ವಿವಿಧ ಘಟನಾವಳಿಗಳ ದೃಶ್ಯಗಳು ನೋಡುಗರನ್ನು ಆಕರ್ಷಿಸುತ್ತಿವೆ. ಕಲಾವಿದ ಸಂತೋಷ ತಂಬಾಕಿ ಅವರ ನೇತೃತ್ವದ ತಂಡ ಅದ್ಭುತ ಚಿತ್ರಗಳನ್ನು ಬಿಡಿಸಿದೆ.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಉತ್ಸವದ ಯಶಸ್ಸಿಗೆ ವಿಶೇಷ ತಯಾರಿ ಮಾಡಿಕೊಳ್ಳಲಾಗಿದೆ. ಕೋಟೆ ಆವರಣದಲ್ಲಿ ಕಾರ್ಯಕ್ರಮದ‌ ಮುಖ್ಯ ವೇದಿಕೆ, ಸಮನಾಂತರ ವೇದಿಕೆ, ಆಸನಗಳ ವ್ಯವಸ್ಥೆ, ಮೆರವಣಿಗೆ ಮಾರ್ಗ ಸೇರಿ ಕಾರ್ಯಕ್ರಮದ ಯಶಸ್ಸಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

3 ದಿನ ಸಾಂಸ್ಕೃತಿಕ ಹಬ್ಬ:ಮೂರು ದಿನಗಳ ಉತ್ಸವದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ಮನರಂಜನೆಯ ರಸದೌತಣ ಉಣಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿವಿಧ ಸಚಿವರು ಆಗಮಿಸಲಿದ್ದಾರೆ. ಮೊದಲ ದಿನ ಚಿತ್ರನಟರಾದ ದಿಗಂತ್​, ಐಂದ್ರಿತಾ ರೈ, ಚಂದನ್​ ಶೆಟ್ಟಿ ಹಾಗೂ ಹಾಸ್ಯಗಾರ ಯೋಗಿ ಗೌಡ ತಂಡ ಹಾಗೂ ಸರಿಗಮಪ ತಂಡದಿಂದ ಕಾರ್ಯಕ್ರಮ ನಡೆಯಲಿದೆ. ಎರಡನೇ ದಿನ ಖ್ಯಾತ ಗಾಯಕ ವಿಜಯ್ ಪ್ರಕಾಶ್​, ಕೊಳಲು ವಾದಕ ಪ್ರವೀಣ್​ ಗೋಡ್ಕಿಂಡಿ ಸೇರಿ ಮತ್ತಿತರರು ಮನರಂಜನೆ ನೀಡಲಿದ್ದಾರೆ. ಅದೇ ರೀತಿ ಕೊನೆಯ ದಿನ ಖ್ಯಾತ ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್, ಖ್ಯಾತ ಗಾಯಕ ಜಸ್ ಕರಣ್ ಸೇರಿ ಮತ್ತಿತರರ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಉತ್ಸವಕ್ಕೆ ಮೆರುಗು ತರಲಿದೆ.

ಇದನ್ನೂ ಓದಿ:ಅ.23ರಂದೇ ಕಿತ್ತೂರು ರಾಣಿ ಚನ್ನಮ್ಮ ಅಂಚೆ ಚೀಟಿ ಬಿಡುಗಡೆ: ಸಚಿವ ಜೋಶಿ

Last Updated : Oct 22, 2024, 10:56 PM IST

ABOUT THE AUTHOR

...view details