ಕೊಪ್ಪಳ:ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಗವಿಮಠದ ಆವರಣದಲ್ಲಿ ಆಯೋಜಿಸಿದ್ದ ಗವಿಶ್ರೀ ಗಾಳಿಪಟ ಉತ್ಸವದಲ್ಲಿ ತರಹೇವಾರಿ ಬಣ್ಣ ಬಣ್ಣದ ಪತಂಗಗಳು ಜಾತ್ರೆಗೆ ಬಂದ ಭಕ್ತರ ಗಮನಸೆಳೆದವು.
ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ : ವಿವಿಧ ರಾಜ್ಯಗಳಿಂದ ಬಂದಿರುವ ಗಾಳಿಪಟ ಕ್ರೀಡಾಳುಗಳು ಬೃಹತ್ ಗಾತ್ರದ ವಿವಿಧ ಬಗೆಯ ಗಾಳಿಪಟ ಹಾರಿಸುವ ಮೂಲಕ ನೆರೆದಿದ್ದವರನ್ನ ರಂಜಿಸಿದರು. ಅದರಲ್ಲಿ ಆಂಜನೇಯ, ರಾಕೆಟ್, ಪತಂಗ, ಚಿರತೆ, ಶ್ರೀರಾಮ, ಕೊರೊನಾ ವೈರಸ್ ಆಕೃತಿ ಹೀಗೆ ಹತ್ತು ಹಲವು ಆಕೃತಿಯ ಗಾಳಿಪಟಗಳು ಗವಿಮಠದ ಗುಡ್ಡದೆತ್ತರಕ್ಕೆ ಹಾರಿ, ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಹಲವು ಬಣ್ಣ ಬಣ್ಣದ ಗಾಳಿ ಪಟಗಳನ್ನು ಕಂಡು ಜಾತ್ರೆಗೆ ಬಂದವರು ಫುಲ್ ಖುಷ್ ಆದರು.
ಗಾಳಿ ಪಟ ಉತ್ಸವದ ಬಗ್ಗೆ ಭಕ್ತೆ ದೀಪಿಕಾ ಮಾತನಾಡಿದರು (ETV Bharat) ಜಾತ್ರೆ ಆಗಮಿಸಿದ್ದ ದೀಪಿಕಾ ಅವರು ಮಾತನಾಡಿ, ''ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟ ಹಾರಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಾನಾ ರೀತಿಯ ಗಾಳಿಪಟಗಳು ಇಲ್ಲಿವೆ ಬಂದಿವೆ. ನಮ್ಮ ಮಕ್ಕಳಿಗೂ ಇವುಗಳನ್ನ ತೋರಿಸಬಹುದು. ಈ ರೀತಿ ಜಾತ್ರೆಯಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನ ಮಾಡಿದ್ರೆ, ನಮ್ಮ ಪೀಳಿಗೆಯವರಿಗೆ ಇದರ ಕುರಿತು ತಿಳಿಯುತ್ತೆ. ನಮಗೆ ಉತ್ಸವದಿಂದ ಖುಷಿಯಾಗಿದೆ'' ಎಂದು ಹೇಳಿದ್ದಾರೆ.
ಹುಲಿ ಆಕೃತಿಯ ಗಾಳಿಪಟ (ETV Bharat) ಗಾಳಿಪಟ ಹಾರಿಸುವ ವಿ.ಕೆ ರಾವ್ ಅವರು ಮಾತನಾಡಿ, ''ಮೊದಲೆಲ್ಲಾ ಬಿಲ್ಲು ಬಾಣದ ರೀತಿ ಮಾಡಿ ಗಾಳಿಪಟ ಮಾರುತ್ತಿದ್ದರು. ಇಲ್ಲಿ ಕುದುರೆ, ಆಮೆ, ಹಸು, ಹುಲಿ ಮೊದಲಾದ ಗಾಳಿಪಟಗಳಿವೆ. ಜಾತ್ರೆಯಲ್ಲಿ ಗಾಳಿಪಟ ಆಯೋಜನೆ ಮಾಡುವುದರಿಂದ ಇಲ್ಲಿಗೆ ಬರುವ ಜನರಿಗೆ ಹುಮ್ಮಸ್ಸು ಬರುತ್ತೆ. ಸುತ್ತೂರು ಮಠದಲ್ಲಿ ಸುಮಾರು 10 ವರ್ಷದಿಂದ ಗಾಳಿಪಟ ಹಾರಿಸುತ್ತಿದ್ದೇನೆ. ಎಲ್ಇಡಿ ಕೈಟ್ಸ್ ಇದೆ. ಅದನ್ನೂ ಹಾರಿಸುತ್ತೇವೆ. ಸಂಜೆವರೆಗೂ ಕಾರ್ಯಕ್ರಮ ನಡೆಯಲಿದೆ'' ಎಂದು ತಿಳಿಸಿದರು.
ಇದನ್ನೂ ಓದಿ :ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ ಫಲ ಪುಷ್ಪ ಪ್ರದರ್ಶನ - GAVISIDDESHWARA FAIR CELEBRATION