ಕಾರವಾರ:ದೇವರಿಗೆ ಕುರಿ, ಕೋಳಿ ಜೊತೆಗೆ ಮದ್ಯದ ಅಭಿಷೇಕ ಮಾಡಿ ಸಿಗರೇಟಿನ ಆರತಿ ಬೆಳಗುವ ವಿಶಿಷ್ಟ ಸಂಪ್ರದಾಯದ ಖಾಫ್ರಿ ದೇವರ ಜಾತ್ರೆ ನಗರದ ಕೋಡಿಭಾಗದಲ್ಲಿ ಭಾನುವಾರ ನಡೆಯಿತು. ಕಾಳಿ ನದಿ ದಂಡೆಯ ಸಮೀಪ ಇರುವ ಖಾಫ್ರಿ ದೇವರ ಜಾತ್ರೆಗೆ ನೂರಾರು ಭಕ್ತರು ಸಂಜೆವರೆಗೂ ಮದ್ಯ, ಸಿಗರೇಟು, ಮೇಣದಬತ್ತಿ, ತುಲಾಭಾರದ ಸೇವೆ ಅರ್ಪಿಸಿ ಪೂಜೆ ಸಲ್ಲಿಸಿದರು. ಅಲ್ಲದೆ ಭಕ್ತರು ದೇವರಿಗೆ ಕೋಳಿಗಳ ಬಲಿ ನೀಡುವ ಮೂಲಕ ಹರಕೆ ಸಮರ್ಪಿಸಿದರು. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೇ, ರಾಜ್ಯ ಹಾಗೂ ಹೊರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಿಂದಲೂ ಭಕ್ತರು ಆಗಮಿಸಿ ಹರಕೆ ಒಪ್ಪಿಸಿ ಪೂಜೆ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿರುವ ದೇವರು ಸುತ್ತಮುತ್ತಲಿನ ಜನರ ಇಷ್ಟಾರ್ಥಗಳನ್ನು ಈಡೇರಿಸುವುದರ ಜತೆಗೆ ಈ ಭಾಗದಲ್ಲಿ ಯಾವುದೇ ಅಪಘಾತಗಳಾಗದಂತೆ, ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ರಕ್ಷಣೆ ಮಾಡುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಇದರಿಂದ ಸ್ಥಳೀಯರಲ್ಲದೆ, ಮೀನುಗಾರರು, ಪ್ರತಿ ನಿತ್ಯ ಹೆದ್ದಾರಿಯಲ್ಲಿ ಸಂಚಾರ ಮಾಡುವವರು ದೇವರಿಗೆ ಮದ್ಯದ ಅಭಿಷೇಕ ಮಾಡುತ್ತಾರೆ.
ಖಾಫ್ರಿ ದೇವರು ಕಳೆದ ಐದಾರು ತಲೆಮಾರುಗಳಿಂದ ಈ ಭಾಗದಲ್ಲಿ ನೆಲೆಸಿ ಇಲ್ಲಿನ ಜನರಿಗೆ ರಕ್ಷಣೆ ನೀಡುತ್ತಿದೆ. ಸ್ಥಳೀಯವಾಗಿ ಅಲ್ಲದೆ ಬೇರೆ ಬೇರೆ ಭಾಗದ ನೂರಾರು ಜನರು ದೇವಿಗೆ ನಡೆದುಕೊಳ್ಳುತ್ತಾರೆ. ಇತರ ದೇವಸ್ಥಾನಗಳಲ್ಲಿ ನಡೆಯುವಂತೆಯೇ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತದೆ. ದೇವರಿಗೆ ಇಷ್ಟಾರ್ಥಗಳ ಸಿದ್ಧಿಗಾಗಿ ಭಕ್ತರು ಹಣ್ಣುಕಾಯಿ, ದವಸ ದಾನ್ಯ, ಹಾಲು ಮೊಸರು ಇತ್ಯಾದಿ ಹರಕೆ ಜತೆಗೆ ಮದ್ಯ ಹಾಗೂ ಸಿಗರೇಟನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾರೆ.