ಕರ್ನಾಟಕ

karnataka

ETV Bharat / state

ಬಿರುಗಾಳಿ ಸಹಿತ ಮಳೆ: ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಮುಂದುವರಿಸಿದ ಹವಾಮಾನ ಇಲಾಖೆ - Karnataka Weather Report

ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಹವಾಮಾನ ಇಲಾಖೆ ಕರಾವಳಿ ಮತ್ತು ಮಲೆನಾಡಿನ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮುಂದುವರಿಸಿದೆ.

RED ALERT FOR FIVE DISTRICTS  HEAVY RAIN IN KARNATAKA  METEOROLOGICAL DEPARTMENT NOTICE  BENGALURU
ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕು (ETV Bharat)

By ETV Bharat Karnataka Team

Published : Jul 15, 2024, 6:00 PM IST

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕು ಪಡೆದಿದ್ದು, ಎಲ್ಲೆಡೆ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದೂ ಕೂಡ ಹವಾಮಾನ ಇಲಾಖೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನ ರೆಡ್ ಅಲರ್ಟ್, ನಂತರದ ಎರಡು ದಿನ ಆರೆಂಜ್ ಅಲರ್ಟ್ ಕೊಡಲಾಗಿದೆ. ಇನ್ನು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಇಂದು ಮತ್ತು ನಾಳೆ ರೆಡ್, ನಂತರದ ಎರಡು ದಿನ ಆರೆಂಜ್, ಜುಲೈ 19 ರಂದು ಯೆಲ್ಲೋ ಅಲರ್ಟ್ ಪೋಷಿಸಲಾಗಿದೆ.

ಉಳಿದಂತೆ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಇಂದಿಂದ ನಾಲ್ಕು ದಿನ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಹಾಸನ, ಕೊಡಗು, ಮೈಸೂರು ಜಿಲ್ಲೆಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗ 30 ರಿಂದ 40 ಕಿಮೀ ಪ್ರತಿ ಗಂಟೆಗೆ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಗಾಳಿಯ ವೇಗವು 40 ರಿಂದ 50 ಕಿಮೀ ಪ್ರತಿ ಗಂಟೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕು (Meteorological department)

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಧಾರಾಕಾರ ಮಳೆ ಮತ್ತು ನಿರಂತರ ಗಾಳಿ ಇರಲಿದೆ. ಒಳನಾಡಿನ ಕಲಬುರಗಿ, ಬೀದರ್, ಧಾರವಾಡ, ಹಾವೇರಿ, ರಾಯಚೂರು, ಯಾದಗಿರಿ, ಕೊಡಗು, ಮೈಸೂರು ಮತ್ತು ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ಜೊತೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ:ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಡಿಗ್ರಿ ಮತ್ತು 20 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕು (Meteorological department)

ಮೀನುಗಾರರಿಗೆ ಎಚ್ಚರಿಕೆ: ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಕರಾವಳಿ ಭಾಗದಲ್ಲಿ ಇರಲಿದ್ದು, ಗಂಟೆಗೆ 45 ಕಿಮೀ ರಿಂದ 55 ಕಿಲೋಮೀಟರ್ ಪ್ರತಿ ಗಂಟೆಗೆ ಬೀಸಲಿದೆ. ಕರ್ನಾಟಕ ಕರಾವಳಿಯ ಬಿರುಗಾಳಿ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಹವಾಮಾನ ಕೇಂದ್ರದ ನಿರ್ದೇಶಕರು ಹೇಳಿದ್ದು ಹೀಗೆ: ಉತ್ತರ ಗುಜರಾತ್ - ಉತ್ತರ ಕೇರಳದ ಉದ್ದಕ್ಕೂ ಸಮುದ್ರ ಮಟ್ಟದಲ್ಲಿ ತೀರದ ಟ್ರೌಘ್ ಇದ್ದು, ಮಹಾರಾಷ್ಟ್ರ-ಉತ್ತರ ಕೇರಳ ಕರಾವಳಿಯಲ್ಲಿ ಸಾಗುತ್ತಿದೆ. ಸಮುದ್ರ ಮಟ್ಟದಿಂದ ಮಾನ್ಸೂನ್ ಮಾರುತಗಳು 3.1 ನಿಂದ 7.6 ಕಿಮೀ ನಡುವೆ ಚಲಿಸುತ್ತಿವೆ. ಆದ್ದರಿಂದ ಕರಾವಳಿ ಕರ್ನಾಟಕ ಮತ್ತು ಪಕ್ಕದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಬಲವಾದ ಗಾಳಿ ಒಮ್ಮುಖವಾಗಿದೆ. ಈ ಕಾರಣಕ್ಕೆ ನೈಋತ್ಯ ಮಾನ್ಸೂನ್ ರಾಜ್ಯಾದ್ಯಂತ ಸಕ್ರಿಯವಾಗಿದೆ. ರಾಜ್ಯದ ಬಹುತೇಕ ಕಡೆ ಮಳೆಯಾಗಿದೆ. ನಿನ್ನೆಯಿಂದ ಅತೀ ಹೆಚ್ಚು ಮಳೆ (25 ಸೆಮೀ) ಉತ್ತರ ಕನ್ನಡ ಜಿಲ್ಲೆಯ ಜಗಲಬೆಟ್​ನಲ್ಲಿ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಓದಿ:ಉತ್ತರ ಕನ್ನಡದಲ್ಲಿ ವರುಣಾರ್ಭಟ: ಮನೆ ಮೇಲೆ ಗುಡ್ಡ ಕುಸಿತ, ಬಂಡೆಗಲ್ಲು ಉರುಳಿ ಭಾರಿ ಹಾನಿ - Rocks Falls on Home

ABOUT THE AUTHOR

...view details