ಬೆಂಗಳೂರು:ಪದೇ ಪದೆ ಅವಿಶ್ವಾಸ ನಿರ್ಣಯ ತಂದು ಸಂಘದ ವರ್ಚಸ್ಸಿಗೆ ಧಕ್ಕೆ ತರಬೇಡಿ ಮತ್ತು ಅಭಿವೃದ್ಧಿಗೆ ಕೈಜೋಡಿಸಿ ಎಂದು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರಿಗೆ ಮನವಿ ಮಾಡಿದ್ದಾರೆ.
ಒಕ್ಕಲಿಗರ ಸಂಘದ ಕಚೇರಿಯಲ್ಲಿ ಸಂಘದ ಉಪಾಧ್ಯಕ್ಷ ಆರ್.ಪ್ರಕಾಶ್, ಗೌರವಾಧ್ಯಕ್ಷ ಎಂ.ಪುಟ್ಟಸ್ವಾಮಿ ಹಾಗೂ ಡಾ.ಟಿ.ಹೆಚ್.ಆಂಜನಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜುಲೈ 4 ರಂದು ರಾಜ್ಯ ಒಕ್ಕಲಿಗರ ಸಂಘ ನೂತನ ಅಧ್ಯಕ್ಷರಾಗಿ ಸಿ.ಎನ್.ಬಾಲಕೃಷ್ಣ ಹಾಗೂ ಇತರರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರು. ಪದಾಧಿಕಾರಿಗಳಾಗಿ ಆಯ್ಕೆಯಾದ ಕೇವಲ 14 ದಿನಕ್ಕೆ ಅಂದರೆ ಜುಲೈ 18ಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ನೀಡಲಾಗಿತ್ತು. ಆದರೆ, ಸಂಘದ ಕಾರ್ಯಕಾರಿ ಸಮಿತಿ ಆ ನೋಟಿಸ್ ತಿರಸ್ಕರಿಸಿತ್ತು ಎಂದು ಮಾಹಿತಿ ನೀಡಿದರು.
ನಂತರ ಜುಲೈ 30ಕ್ಕೆ ಸಭೆ ನಡೆಸಿದ ಕೆಲವು ಸದಸ್ಯರು, ಆ.9ಕ್ಕೆ ತಾವೇ ಅವಿಶ್ವಾಸ ನಿರ್ಣಯದ ಕುರಿತು ನೋಟಿಸ್ ನೀಡಿದ್ದರು. ಆಗ ಸಂಘದ ಹಾಲಿ ಪದಾಧಿಕಾರಿಗಳು ನಗರದ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಭಯ ತಂಡಗಳಿಗೆ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು ಎಂದು ತಿಳಿಸಿದರು.
ಒಕ್ಕಲಿಗರ ಸಂಘದ ಉಪಾಧ್ಯಕ್ಷ ಆರ್.ಪ್ರಕಾಶ್ ಇತರರಿಂದ ಸುದ್ದಿಗೋಷ್ಠಿ (ETV Bharat) ಅ.1ರಂದು ಹೈಕೋರ್ಟ್ ಈ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದೆ. ಅರ್ಜಿದಾರರು ಅಥವಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸ್ವತಂತ್ರರು. ಆದರೆ, ಹಾಗೆ ಮಂಡಿಸುವ ಮುನ್ನ ಸಂಘದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ನೀಡಬೇಕು. ಆ ಅವಿಶ್ವಾಸ ನಿರ್ಣಯದ ಪ್ರಸ್ತಾವನೆಯನ್ನು ಸರ್ವ ಸದಸ್ಯರ ಸಭೆಯ ಮುಂದಿಟ್ಟು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಸಭೆಯಲ್ಲಿ ಚರ್ಚೆ ಹಾಗೂ ಮತದಾನದ ಹಕ್ಕು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ ಎಂದರು.
ಒಕ್ಕಲಿಗರ ಸಂಘದ ಬೈಲಾಗೆ ತಿದ್ದುಪಡಿ:ಹೀಗೆ, ಪದೇ ಪದೆ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವುದನ್ನು ತಪ್ಪಿಸುವಂತೆ ಹೈಕೋರ್ಟ್ ಹೇಳಿದೆ. ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಂತರ ಒಂದು ವರ್ಷಗಳ ಕಾಲ ಅವಿಶ್ವಾಸ ನಿರ್ಣಯ ಮಂಡಿಸದಂತೆ ಸಂಘದ ನಿಯಮಗಳಿಗೆ ತಿದ್ದುಪಡಿ ತರುವುದು ಸೂಕ್ತ ಎಂದೂ ನ್ಯಾಯಾಲಯ ಸಲಹೆ ನೀಡಿದೆ. ನ್ಯಾಯಾಲಯದ ಆದೇಶದಂತೆ ರಾಜ್ಯ ಒಕ್ಕಲಿಗರ ಸಂಘದ ಬೈಲಾಗೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಗಾಗ್ಗೆ ಅವಿಶ್ವಾಸ ನಿರ್ಣಯ ಮಂಡಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ವೈಮನಸ್ಸುಗಳು ಸಂಘದ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಪ್ಪು ಮಾಡಿದರೆ ಅವಿಶ್ವಾಸ ನಿರ್ಣಯ ಮಂಡಿಸಿ: ''ಸಂಘವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಲು ಹಾಲಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಇದನ್ನು ಸಹಿಸದ ಸಂಘದ ಕೆಲವು ನಿರ್ದೇಶಕರಿಂದ ಪೂರ್ಣ ಸಹಕಾರ ಸಿಗುತ್ತಿಲ್ಲ. ಇದು ಬೇಸರದ ಸಂಗತಿ. ಇದರ ನಡುವೆ ಅಸಮಾಧಾನಗೊಂಡು ನ್ಯಾಯಾಲಯಕ್ಕೆ ಹೋಗಿರುವ ಸದಸ್ಯರಿಗೆ ನಾವು ವಿನಮ್ರವಾಗಿ ಮನವಿ ಮಾಡುತ್ತಿದ್ದು, ನಮಗೆ ಒಂದು ವರ್ಷ ಅವಕಾಶ ಕೊಡಿ. ನಾವು ತಪ್ಪು ಮಾಡಿದರೆ ಅವಿಶ್ವಾಸ ನಿರ್ಣಯ ಮಂಡಿಸಿ'' ಎಂದು ಸಂಘದ ಉಪಾಧ್ಯಕ್ಷ ಆರ್.ಪ್ರಕಾಶ್ ತಿಳಿಸಿದರು.
ಜಮೀನು ಖರೀದಿಸಲು ಕ್ರಮ:''ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ಸೀಟುಗಳು 119ರಿಂದ 187ಕ್ಕೆ ಹೆಚ್ಚಳವಾಗಿವೆ. ಅಲ್ಲದೆ, ಎಂಬಿಬಿಎಸ್‌ನ ಸೀಟುಗಳನ್ನು 150ರಿಂದ 250ಕ್ಕೆ ಹೆಚ್ಚಳ ಮಾಡಲು ಭಾರತ ಸರ್ಕಾರದ ಅನುಮೋದನೆ ದೊರೆತಿದೆ. ಬೆಂಗಳೂರಿನ ಯಶವಂತಪುರ ಹೋಬಳಿಯ ಶ್ರೀಗಂಧದಕಾವಲ್ ಗ್ರಾಮದ 10 ಎಕರೆ ಜಮೀನನ್ನು ಮರಳಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಪಡೆಯಲಾಗಿದೆ. ಕೆಂಗೇರಿ ಹೋಬಳಿಯ ವಳಗೇರಹಳ್ಳಿ ಗ್ರಾಮದಲ್ಲಿ 1.37 ಎಕರೆ ಜಮೀನು ಸಂಘಕ್ಕೆ ದೊರೆತಿದ್ದು, ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ (ಬಿಐಟಿ-2) ಕಾಲೇಜು ಸ್ಥಾಪನೆ ಮಾಡುವ ಗುರಿಯಿದೆ. ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಜಮೀನು ಖರೀದಿಸಲು ಕ್ರಮ ವಹಿಸಲಾಗಿದೆ'' ಎಂದು ಆರ್.ಪ್ರಕಾಶ್ ವಿವರಿಸಿದರು.
ಇದನ್ನೂ ಓದಿ:ಒಕ್ಕಲಿಗರ ಸಂಘದಲ್ಲಿ ಅವಿಶ್ವಾಸ ನಿರ್ಣಯ: ನಿಯಮಗಳ ತಿದ್ದುಪಡಿ ಉತ್ತಮ - ಹೈಕೋರ್ಟ್ ಸಲಹೆ - High Court