ಬೆಂಗಳೂರು: ರಾಜ್ಯ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಗರಣ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿರುವ ಸತ್ಯನಾರಾಯಣ ವರ್ಮಾ ತನಗೆ ಜೀವ ಬೆದರಿಕೆ ಇರುವುದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವ ಬಿ.ನಾಗೇಂದ್ರ ಆಪ್ತರಿಂದ ತನಗೆ ಬೆದರಿಕೆ ಬೆದರಿಕೆಯಿದೆ ಎಂದು ಬುಧವಾರ ನ್ಯಾಯಾಧೀಶರ ಮುಂದೆ ಸತ್ಯನಾರಾಯಣ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣದಲ್ಲಿ 13ನೇ ಆರೋಪಿಯಾಗಿರುವ ಸತ್ಯನಾರಾಯಣ ವರ್ಮಾ ಸೇರಿದಂತೆ ಮೂವರು ಆರೋಪಿಗಳನ್ನು ಬುಧವಾರ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ, ತನಗೆ ಮಾಜಿ ಸಚಿವ ಬಿ.ನಾಗೇಂದ್ರ ಬೆಂಬಲಿಗರಿಂದ ಜೀವ ಬೆದರಿಕೆ ಇದೆ. ತಮ್ಮ ಬಂಧನಕ್ಕೂ ಮುನ್ನವೇ ಸಹಚರರು ಮನೆಗೆ ಬಂದು ಇಡೀ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವ ವೇಳೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಸತ್ಯನಾರಾಯಣ ಆರೋಪಿಸಿದ್ದಾರೆ.
ಆರೋಪಿಯ ಹೇಳಿಕೆಯನ್ನ ದಾಖಲಿಸಿಕೊಂಡಿರುವ ನ್ಯಾಯಾಧೀಶರು, ಹಲ್ಲೆ ಯತ್ನದ ಆರೋಪ ಸಂಬಂದ ತನಿಖೆ ಮಡೆಸುವಂತೆ ಹಲಸೂರುಗೇಟ್ ಠಾಣಾ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:ಶಿವಮೊಗ್ಗದಲ್ಲಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ನಿಗಮದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ ನಿಗಮದ ಮೇಲಧಿಕಾರಿಗಳ ಹೆಸರು ಹಾಗೂ ಮಂತ್ರಿ ಎಂದು ಉಲ್ಲೇಖಿಸಿ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ರಚನೆ ಮಾಡಿದೆ.
ಈ ಪ್ರಕರಣದ ಬೆಳಕಿಗೆ ಬಂದ ಬೆನ್ನಲ್ಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಬಂಧಿತ ಆರೋಪಿ ಸತ್ಯನಾರಾಯಣ ವರ್ಮಾನೇ ಪ್ರಕರಣದ ಕಿಂಗ್‌ಪಿನ್ ಎನ್ನಲಾಗಿದೆ. ಸತ್ಯನಾರಾಯಣಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದ ಎಸ್ಐಟಿ, ಈಗಾಗಲೇ ಆತನ ಸಂಬಂಧಿಯೊಬ್ಬರ ಮನೆಯಲ್ಲಿ 4 ಸೂಟ್ ಕೇಸ್ನಲ್ಲಿ ತುಂಬಿರಿಸಲಾಗಿದ್ದ 8.21 ಕೋಟಿ ರೂ. ಹಣ, ಆತನ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಜಪ್ತಿ ಮಾಡಿದೆ. ಎರಡು ದಿನಗಳ ಹಿಂದೆ ಸತ್ಯನಾರಾಯಣ ಸಹಚರ ಸಾಯಿತೇಜ್ ಎಂಬುವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ:ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ: ಕುರಿ, ದನ ಕಾಯೋರು ಸೇರಿ 700ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ..!