ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಗೆ ಸುತ್ತಲಿನ ಜಿಲ್ಲೆಗಳಿಂದ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅವರ ಅನುಕೂಲಕ್ಕೆ ನಗರದಲ್ಲಿ ನಾಲ್ಕು ಪ್ರಮುಖ ಬಸ್ ನಿಲ್ದಾಣಗಳಿವೆ. ಅವುಗಳಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹಳೇ ಬಸ್ ನಿಲ್ದಾಣ ಡಿಸೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ.
ಹಳೆ ಬಸ್ ನಿಲ್ದಾಣ ಈ ಭಾಗದ ಜನರ ಸಂಪರ್ಕ ಕೊಂಡಿಯಾಗಿದ್ದು, ಯಾವ ರೀತಿ ಕಾರ್ಯಾಚರಣೆ ನಡೆಸಲಿದೆ ಎಂಬ ಕುತೂಹಲ ಈ ಭಾಗದ ಜನರಲ್ಲಿ ಮೂಡಿದೆ. ಈ ಹಿಂದೆ ಸಾಮಾನ್ಯವಾಗಿ ಎಲ್ಲಾ ಭಾಗಕ್ಕೂ ಸಂಚರಿಸುತ್ತಿದ್ದ ಬಸ್ಗಳು ಹಳೇ ಬಸ್ ನಿಲ್ದಾಣಕ್ಕೆ ಭೇಟಿಕೊಟ್ಟು ಹೋಗುತ್ತಿದ್ದವು. ಆದರೆ ಈಗ ನೂತನವಾಗಿ ನಿರ್ಮಾಣಗೊಂಡ ಹಳೇ ಬಸ್ ನಿಲ್ದಾಣ ಕೇವಲ ನಗರ, ಬಿಆರ್ಟಿಎಸ್ ಹಾಗೂ ಉಪನಗರ ಸಾರಿಗೆಗೆ ಮಾತ್ರ ಮೀಸಲಾಗಿದೆ.
![old-bus-stand](https://etvbharatimages.akamaized.net/etvbharat/prod-images/28-11-2024/22985201_dsdsd-5.png)
ವಾಣಿಜ್ಯ ದೃಷ್ಟಿಯಿಂದ ಹುಬ್ಬಳ್ಳಿಯು ಕೂಡ ಪ್ರಮುಖ ನಗರವಾಗಿದೆ. ಅಂದಾಜಿನ ಪ್ರಕಾರ, ನಿತ್ಯ 8-10 ಲಕ್ಷ ಜನರು ಹುಬ್ಬಳ್ಳಿಗೆ ಬಂದು ಹೋಗುತ್ತಾರೆ. ಇಷ್ಟು ಪ್ರಯಾಣಿಕರನ್ನು ನಿರ್ವಹಿಸಲು ಸಿಟಿ ಬಸ್ ನಿಲ್ದಾಣ (ಸಿಬಿಟಿ), ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ, ಇಲ್ಲಿ ಕೇವಲ ನಗರ ಹಾಗೂ ಉಪನಗರಕ್ಕೆ ಮೀಸಲಿಡಲು ವಾಯುವ್ಯ ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ.
ಈ ಹಿಂದೆ ನಗರಕ್ಕೆ ಆಗಮಿಸುವ ಹಾಗೂ ನಗರದಿಂದ ತೆರಳುವ ಪ್ರತಿ ಬಸ್ ಕೂಡ ಹಳೇ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವುದು ಕಡ್ಡಾಯವಾಗಿತ್ತು. ಆದರೆ ಈಗ ವಾಹನ ದಟ್ಟಣೆಯಿಂದ ಕೊಂಚ ಬದಲಾವಣೆಗೆ ಸಾರಿಗೆ ಸಂಸ್ಥೆ ಯೋಚಿಸಿದೆ.
ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುವ ಬಸ್ಗಳು : ಸದ್ಯ ಕಾರ್ಯರೂಪದಲ್ಲಿ ಇರುವಂತೆ ಹೊಸ ಬಸ್ ನಿಲ್ದಾಣ (ಗೋಕುಲ್ ರೋಡ್)ದಿಂದ ಬೆಂಗಳೂರು, ಮುಂಬೈ, ಗೋವಾ, ಹೈದರಾಬಾದ್, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಬೀದರ್, ಗುಲ್ಬರ್ಗಾ, ಹಾವೇರಿ, ಕೊಪ್ಪಳ, ರಾಯಚೂರು, ಮಂತ್ರಾಲಯ, ಮಂಗಳೂರು, ಉಡುಪಿ, ಕಾರವಾರ ಬಸ್ಗಳು ಇಲ್ಲಿಂದ ಕಾರ್ಯಾಚರಣೆ ನಡೆಸುತ್ತಿವೆ.
![old-bus-stand](https://etvbharatimages.akamaized.net/etvbharat/prod-images/28-11-2024/22985201_dsdsd-4.png)
ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ : ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಹೊಸ ನಿಲ್ದಾಣದಿಂದ ವಿಜಯಪುರ, ಬಾಗಲಕೋಟೆ, ಗದಗ ಬಸ್ಗಳು ನೇರವಾಗಿ ಕಾರ್ಯಾಚರಣೆ ನಡೆಸುತ್ತವೆ. ಇದಲ್ಲದೇ ತಾಲೂಕು ಕೇಂದ್ರಗಳಾದ ಕಲಘಟಗಿ, ನವಲಗುಂದ, ಶಿರಹಟ್ಟಿ, ಅಣ್ಣಿಗೇರಿ, ನರಗುಂದ, ಅಳ್ನಾವರ, ಕುಂದಗೋಳಕ್ಕೆ ಬಸ್ಗಳು ಕಾರ್ಯಾಚರಣೆ ನಡೆಸುತ್ತವೆ.
ಇದಲ್ಲದೇ ಹೊಸ ಬಸ್ ನಿಲ್ದಾಣದಿಂದ ಹೊರಡುವ ಬಳ್ಳಾರಿ, ರಾಯಚೂರು, ಕೊಪ್ಪಳ, ಗಂಗಾವತಿ ಬಸ್ಗಳು ಸಂಪರ್ಕಿಸಿ ಪ್ರಯಾಣಿಕರನ್ನು ಕರೆದ್ಯೊಯ್ಯುತ್ತವೆ.
![old-bus-stand](https://etvbharatimages.akamaized.net/etvbharat/prod-images/28-11-2024/22985201_dsdsd-1.png)
ಸಿಟಿ ಬಸ್ ನಿಲಾಣ : ಅವಳಿನಗರದ ನಾಡಿಮಿಡಿತವಾಗಿದ್ದು, ಹುಬ್ಬಳ್ಳಿ - ಧಾರವಾಡಕ್ಕೆ ಸಿಟಿ ಬಸ್, ಬಿಆರ್ಟಿಎಸ್ ಬಸ್ ಗಳು ಸಂಚರಿಸುತ್ತಿವೆ. ಇದಲ್ಲದೆ ಸಾಮಾನ್ಯವಾಗಿ ನಗರದ ಎಲ್ಲಾ 20 ಕಿ.ಮೀ ಅಂತರದಲ್ಲಿ ಸ್ಥಳಗಳಿಗೆ ನಗರ ಬಸ್ ಸೇವೆ ಇಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿವೆ.
ಹಳೇ ಬಸ್ ನಿಲ್ದಾಣ : ನೂತವಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಹಳೇ ಬಸ್ ನಿಲ್ದಾಣ ಈ ಹಿಂದಿಗಿಂತಲೂ ವಿಭಿನ್ನವಾಗಿ ಕಾರ್ಯಾಚರಣೆ ನಡೆಸಲಿದೆ. ಇದು ಕೇವಲ ಉಪನಗರ ಸಾರಿಗೆ (sub arban) ಬಸ್ಗಳಿಗೆ ಮೀಸಲಿಡಲು ವಾಯುವ್ಯ ಸಾರಿಗೆ ಸಂಸ್ಥೆ ಯೋಜಿಸಿದೆ.
![old-bus-stand](https://etvbharatimages.akamaized.net/etvbharat/prod-images/28-11-2024/22985201_dsdsd-3.png)
ವಾಹನ ದಟ್ಟಣೆಯಾಗದಂತೆ ಕಾರ್ಯಾರಂಭ : ಈ ಕುರಿತಂತೆ ವಾಯುವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಹಳೇ ಬಸ್ ನಿಲ್ದಾಣ ಉದ್ಘಾಟನೆಯ ನಂತರ ಸಮಗ್ರ ನಗರ ಸಾರಿಗೆ, ಬಿಆರ್ಟಿಎಸ್ ಹಾಗೂ ಉಪನಗರ ಸಾರಿಗೆ ಇಲ್ಲಿಂದಲೇ ಕಾರ್ಯಾರಂಭ ಮಾಡಲಿವೆ. ಹಳೇ ಬಸ್ ನಿಲ್ದಾಣ ಸಿಟಿ ಬಸ್ ಟರ್ಮಿನಲ್ ಅಂತ ಇರುವುದರಿಂದ ನಗರ ಸಾರಿಗೆ ಹಾಗೂ ಉಪನಗರಕ್ಕೆ ಮೀಸಲಿಡಲಾಗಿದೆ. ಬೆಳಗಾವಿ, ಬಾಗಲಕೋಟೆ ಬಸ್ಗಳು ಸೇರಿದಂತೆ ಹಲವು ಬಸ್ಗಳು ಈಗ ಯಾವ ರೀತಿ ಕಾರ್ಯಾಚರಣೆ ನಡೆಸುತ್ತಿವೆಯೋ ಅದೇ ರೀತಿ ಮುಂದುವರೆಯಲಿವೆ. ವಾಹನ ದಟ್ಟಣೆ, ಜನ ದಟ್ಟಣೆಯಾಗದಂತೆ ಕಾರ್ಯಾಚರಣೆ ನಡೆಸಲಾಗುವುದು'' ಎಂದು ಮಾಹಿತಿ ನೀಡಿದರು.
![old-bus-stand](https://etvbharatimages.akamaized.net/etvbharat/prod-images/28-11-2024/22985201_dsdsd-2.png)
ಇದನ್ನೂ ಓದಿ : ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಶೀಘ್ರದಲ್ಲಿಯೇ ಹೊಸ ರೂಪದೊಂದಿಗೆ ಪುನಾರಂಭ: ಮರುಕಳಿಸಲಿದೆ ಗತವೈಭವ: ಏನಿದರ ವೈಶಿಷ್ಟ್ಯ