ಲಖನೌ (ಉತ್ತರಪ್ರದೇಶ): ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬ್ರಿಟನ್ ಪೌರತ್ವ ಹೊಂದಿದ್ದಾರೆ. ಚುನಾವಣಾ ಅಫಿಡವಿಟ್ನಲ್ಲಿ ಅದನ್ನು ನಮೂದಿಸದೇ ಇರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.
ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಸ್ ವಿಘ್ನೇಶ್ ಶಿಶಿರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಆರ್ ಮಸೂಡಿ ಮತ್ತು ಸುಭಾಷ್ ವಿದ್ಯಾರ್ಥಿ ಅವರಿದ್ದ ಪೀಠ ಈ ಆದೇಶ ನೀಡಿದೆ.
ರಾಹುಲ್ ಗಾಂಧಿ ಅವರ ದ್ವಿಪೌರತ್ವ ಪ್ರಶ್ನಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಮತ್ತು ಪಾಸ್‌ಪೋರ್ಟ್ ಕಾಯ್ದೆ ಅಡಿ ಅವರ ನಾಗರಿಕತ್ವದ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯವು ಅರ್ಜಿದಾರರ ಕೋರಿಕೆಯನ್ನು ಸ್ವೀಕರಿಸಲಾಗಿದೆಯೇ ಎಂದು ಕೇಂದ್ರಕ್ಕೆ ಪೀಠ ಕೇಳಿತ್ತು. ಈ ಬಗ್ಗೆ ಮಂಗಳವಾರದ ವಿಚಾರಣೆಯಲ್ಲಿ ಕೇಂದ್ರದ ಪರವಾಗಿ ಮಾಹಿತಿ ನೀಡಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ಅವರು ಮನವಿ ಅಂಗೀಕರಿಸಲಾಗಿದ್ದು, ತನಿಖೆ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.
ಇದಕ್ಕೆ ಪೀಠವು, ಗೃಹ ಸಚಿವಾಲಯವು ಏನೆಲ್ಲಾ ಕ್ರಮಗಳನ್ನು ಕೈಗೊಂಡಿದೆ. ತನಿಖೆಯ ಹಂತದ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಲು ಸೂಚಿಸಿತು. ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಿ, ಅಂದು ಪೂರ್ಣ ಮಾಹಿತಿಯನ್ನು ತನ್ನ ಮುಂದಿಡಲು ಆದೇಶಿಸಿತು.
ಅರ್ಜಿದಾರರ ತಕರಾರೇನು?: ಶಿಶಿರ್ ಅವರು ಸಲ್ಲಿಸಿರುವ ಪಿಐಎಲ್‌ನಲ್ಲಿ, ವಿಪಕ್ಷ ನಾಯಕರು ಬ್ರಿಟಿಷ್ ಸರ್ಕಾರದ ದಾಖಲೆ, ಕೆಲವು ಇಮೇಲ್‌ಗಳನ್ನು ಹೊಂದಿದ್ದಾರೆ. ಇದು ಅವರು ಬ್ರಿಟಿಷ್ ಪ್ರಜೆ ಎಂದು ಸಾಬೀತುಪಡಿಸುತ್ತದೆ. ಇದರಿಂದಾಗಿ ಅವರು ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ಲೋಕಸಭಾ ಸದಸ್ಯ ಹುದ್ದೆಯನ್ನು ಹೊಂದಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದಾರೆ.
ರಾಹುಲ್ ದ್ವಿಪೌರತ್ವದ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಎರಡು ಬಾರಿ ದೂರು ಸಲ್ಲಿಸಲಾಗಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಿಐಎಲ್ ಸಲ್ಲಿಸಲಾಗಿದೆ ಎಂದು ಎಂದು ಅರ್ಜಿದಾರರು ಹೇಳಿದ್ದಾರೆ.
ಇದನ್ನೂ ಓದಿ: ಸಂವಿಧಾನ ದಿನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗೆ ರಾಹುಲ್ ಗಾಂಧಿ ಅಗೌರವ: ಬಿಜೆಪಿ ಆರೋಪ