ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಫೆಬ್ರವರಿ 12ರಿಂದ (ಸೋಮವಾರ) ಆರಂಭವಾಗಲಿದ್ದು, ಆಡಳಿತ-ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗುವುದು ನಿಶ್ಚಿತವಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಕಾರಣ ಎರಡೂ ಕಡೆಗಳಿಂದ ಚರ್ಚೆಗೆ ಅಧಿವೇಶನ ಮತ್ತಷ್ಟು ಅನುಕೂಲ ಕಲ್ಪಿಸಿಕೊಡಲಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎದುರಿಸುತ್ತಿರುವ ತೀವ್ರ ಹಣಕಾಸಿನ ಸಂಕಷ್ಟವೇ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಾಲಿಗೆ ಪ್ರಮುಖ ಅಸ್ತ್ರವಾಗಲಿದ್ದು, ಅಭಿವೃದ್ಧಿ ಕುಂಠಿತದ ಬಗ್ಗೆ ಪ್ರಸ್ತಾಪಿಸಲು ಆತುರದಿಂದ ಕಾಯುತ್ತಿವೆ. ವಿಧಾನಸಭಾ ಕ್ಷೇತ್ರಗಳಿಗೆ ಸೂಕ್ತ ಪ್ರಮಾಣದ ಅನುದಾನ ದೊರೆಯದೆ ಇರುವುದು, ಕೃಷಿ, ಕೈಗಾರಿಕೆ ಹಾಗೂ ವಿವಿಧ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿರುವುದು ಸೇರಿ ಹಲವು ವಿಷಯಗಳನ್ನು ಅಸ್ತ್ರನ್ನಾಗಿಸಿ ಪರಿಣಾಮಕಾರಿಯಾಗಿ ಪ್ರಯೋಗಿಸಲು ಸಜ್ಜಾಗಿವೆ.
ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸುತ್ತಿದ್ದು, ದಿನದಿಂದ ದಿನಕ್ಕೆ ಜನ ಸಮಸ್ಯೆಗಳಿಗೆ ಸಿಲುಕುತ್ತಿದ್ದರೂ ಸರ್ಕಾರ ಸಮರ್ಪಕ ಪ್ರಮಾಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪ. ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ, ಜಾನುವಾರುಗಳ ಮೇವಿಗೆ ಕೊರತೆ ಎದುರಾಗುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದರೆ, ಈ ವಿಷಯದಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು ಚೇತೋಹಾರಿಯಾಗಿಲ್ಲ. ಈಗಲೇ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಪರದಾಡುತ್ತಿದ್ದು, ಏಪ್ರಿಲ್, ಮೇ ತಿಂಗಳ ವೇಳೆಗೆ ಬಿಗಡಾಯಿಸಲಿರುವ ಬರದ ಹೊಡೆತವನ್ನು ಹೇಗೆ ಎದುರಿಸಲಿದೆ ಎಂಬುದು ಪ್ರತಿಪಕ್ಷಗಳ ಪ್ರಶ್ನೆಯಾಗಿದೆ.
ವಿದ್ಯುತ್ ಪರಿಸ್ಥಿತಿಯೂ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ರಾಜ್ಯದ ವಿದ್ಯುತ್ ಬೇಡಿಕೆ ಪ್ರಮಾಣ 16,000 ಮೆಗಾವ್ಯಾಟ್ಗಳಿಗಿಂತಲೂ ಹೆಚ್ಚಾಗಿದೆ. ಆದರೆ, ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರ ಜನರಿಗೆ ಕತ್ತಲೆ ಭಾಗ್ಯ ಕರುಣಿಸುವುದು ಗ್ಯಾರಂಟಿ. ಜನರಿಗೆ ಅಗತ್ಯವಾದ ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಮಾರ್ಗೋಪಾಯಗಳೇ ಸರ್ಕಾರಕ್ಕೆ ಕಾಣಿಸದಂತಾಗಿದೆ. ಆ ಮೂಲಕ ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂಬುದು ಕೂಡ ಪ್ರತಿಪಕ್ಷಗಳ ಆರೋಪವಾಗಿದೆ.