ಶಿವಮೊಗ್ಗ:ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಎಂಟನೇ ಸ್ಥಾನ ಪಡೆದುಕೊಂಡಿದೆ.
ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯ ಶಿಕಾರಿಪುರ ಪಟ್ಟಣದ ಕುಮದ್ವತಿ ಪಿಯು ಕಾಲೇಜಿನ ಪವನ್ 600ಕ್ಕೆ 596 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಈ ಕುರಿತು ವಿದ್ಯಾರ್ಥಿ ಪವನ್ ಮಾತನಾಡಿ, "ನನಗೆ ವಾಣಿಜ್ಯ ವಿಭಾದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಬಂದಿದೆ. ಸೆಲ್ಫ್ ಸ್ಟಡಿ ಮಾಡುತ್ತಿದ್ದೆ. ಕಾಲೇಜಿನಲ್ಲಿ ಒಳ್ಳೆಯ ಬೆಂಬಲ ಸಿಕ್ಕಿದೆ. ತಡರಾತ್ರಿವರೆಗೂ ಓದುತ್ತಿದ್ದೆ. ರಾತ್ರಿ ವೇಳೆಯಲ್ಲಿ ಓದುವುದೇ ನನಗಿಷ್ಟ. ಫಲಿತಾಂಶ ನೋಡಿ ತುಂಬ ಖುಷಿಯಾಯಿತು" ಎಂದರು.
ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಸಾತ್ವಿಕ್ ಮಾತನಾಡಿ, "590 ಹೆಚ್ಚು ಅಂಕ ಬರುವ ನಿರೀಕ್ಷೆ ಇತ್ತು. 595 ಅಂಕ ಬಂದಿದೆ. ಪ್ರತಿದಿನ ತರಗತಿಯಲ್ಲಿ ಬೋಧಿಸಿದ್ದನ್ನು ಮನೆಗೆ ಬಂದು ಮತ್ತೊಮ್ಮೆ ಓದುತ್ತಿದ್ದೆ. 6 ಗಂಟೆ ನಿದ್ರೆ ಮಾಡಿ, ಉಳಿದ ಸಮಯ ಓದುತ್ತಿದ್ದೆ. ಬೇಸರವಾದಾಗ ಸ್ಪಲ್ಪ ಸಮಯ ಮೊಬೈಲ್ ನೋಡುತ್ತಿದ್ದೆ. ಮೊಬೈಲ್ನಲ್ಲಿಯೂ ಎಜುಕೇಶನ್ ಸಂಬಂಧಿತ ವಿಷಯಗಳನ್ನು ನೋಡುತ್ತಿದ್ದೆ. ಕಾಲೇಜಿನಲ್ಲಿ ಚೆನ್ನಾಗಿ ಪಾಠ ಮಾಡಿರುತ್ತಾರೆ, ಆದರೂ ನಮ್ಮ ಪ್ರಯತ್ನದಿಂದ ಉತ್ತಮ ಫಲಿತಾಂಶ ಬರುತ್ತದೆ. ನನಗೆ ಮನೆಯಲ್ಲಿ ತಂದೆ-ತಾಯಿ, ಅಜ್ಜಿ ಎಲ್ಲರೂ ತುಂಬಾ ಬೆಂಬಲ ನೀಡುತ್ತಿದ್ದರು. ಮುಂದೆ ಇಂಜಿನಿಯರಿಂಗ್ನಲ್ಲಿ ಸಿಎಸ್ ಅಥವಾ ಇಸಿ ಮಾಡಬೇಕೆಂದುಕೊಂಡಿದ್ದೇನೆ. ಅನುತ್ತೀರ್ಣರಾದ ಸ್ನೇಹಿತರು ಯಾವುದೇ ಒತ್ತಡಕ್ಕೆ ಒಳಗಾಗದೇ ಮತ್ತೆ ಓದಿ ಪರೀಕ್ಷೆ ಬರೆದು ಪಾಸಾಗಬಹುದು" ಎಂದು ಸಲಹೆ ನೀಡಿದರು.